

ರಾಯಚೂರು: ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ 371 (ಜೆ)ಮೀಸಲಾತಿಯನ್ನು ಉಲ್ಲಂಘಿಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ದೂರಿದ್ದಾರೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರಿಗೆ ಪತ್ರ ಬರೆದಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಗೊಂದಲ ಏರ್ಪಟ್ಟಿರುವುದರಿಂದ ಈ ಭಾಗದ ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದು, ಸಮಸ್ಯೆಯನ್ನು ಪರಿಸುವಂತೆ ಕೋರಿದ್ದಾರೆ. ನೇರ ನೇಮಕಾತಿ ಮೂಲಕ 1,242 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ 158 ಹುದ್ದೆಗಳನ್ನು 371 (ಜೆ) ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆದರೆ, ಆನ್ಲೈನ್ನಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಈ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲದಂತಾಗಿದೆ.
ಅರ್ಜಿಯಲ್ಲಿ ಕ್ರಮ ಸಂಖ್ಯೆ 14ರಲ್ಲಿ ಹೈಕ ಪ್ರದೇಶದ ಅಡಿಯಲ್ಲಿ ನೀವು ಮೀಸಲಾತಿ ಕೋರುತ್ತಿದ್ದೀರಾ ಎಂದು, 14ಎ ಅಡಿಯಲ್ಲಿ ಎಚ್ಕೆ ಆದ್ಯತೆ ಎಂದು ಕೇಳಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದು ಸರ್ಕಾರ ಸುತ್ತೋಲೆಯ ಉಲ್ಲಂಘನೆಯಾಗಿದೆ. ನೇಮಕಾತಿ ಸಂದರ್ಭದಲ್ಲಿ ಮಿಕ್ಕುಳಿದ ವೃಂದದ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಬಯಸುತ್ತೀರಾ, ಸ್ಥಳೀಯ ಹಾಗೂ ಮಿಕ್ಕುಳಿದ ಎರಡು ವೃಂದದಲ್ಲಿ ಒಂದೇ ಹುದ್ದೆಯ ಅರ್ಹತೆ ಹೊಂದಿದ್ದಲ್ಲಿ ಯಾವ ವೃಂದದ ಹುದ್ದೆಗೆ ಆಯ್ಕೆ ಬಯಸುತ್ತೀರಾ ಎನ್ನುವ ಆಯ್ಕೆಗೆ ಅವಕಾಶ ನೀಡಬೇಕಾಗಿತ್ತು. ಅರ್ಜಿ ಸಲ್ಲಿಸುವಾಗ ಆಯ್ಕೆಗೆ ಅವಕಾಶ ಇಲ್ಲದಿರುವುದರಿಂದ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಈ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಂತೆ ಉದ್ದೇಶಪೂರ್ವಕವಾಗಿ ತಡೆ ಹಿಡಿದಂತಾಗಿದೆ.
ಕಾರಣ ಆನ್ಲೈನ್ ಅರ್ಜಿಯನ್ನು ಮರು ವಿನ್ಯಾಸಗೊಳಿಸಿ ಈಗಾಗಲೇ ಅರ್ಜಿ ಸಲ್ಲಿಸಿದ ಸ್ಥಳೀಯ ಅಭ್ಯರ್ಥಿಗಳಿಗೆ ತಮ್ಮ ಆಯ್ಕೆಯನ್ನು ಮರು ನಿಗದಿಗೊಳಿಸಲು ಅವಕಾಶ ನೀಡಬೇಕು ಎಂದು ಡಾ.ರಜಾಕ್ ಉಸ್ತಾದ್ ಪತ್ರದಲ್ಲಿ ಮನವಿ ಮಾಡಿದ್ದಾರೆ.