

ರಾಯಚೂರು: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂಬೇಡ್ಕರ್‌ರ ಮಹಾ ಪರಿನಿರ್ವಾಣ ದಿನವಾದ ಡಿ.6ರಂದು ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ ಅರೋಲಿ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆರ್‌ಎಸ್‌ಎಸ್, ಬಿಜೆಪಿ ದುರಾಡಳಿತ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ, ಸಾಮಾಜಿಕ ನ್ಯಾಯ, ಮೀಸಲಾತಿ ಆಶಯ ನಾಶ ಮಾಡುತ್ತಿರುವುದನ್ನು ಖಂಡಿಸಿ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವುದಾಗಿ ಹೇಳುತ್ತಲೇ ಖಾಸಗೀಕರಣ ನಡೆಸಿದೆ. ಖಾಸಗಿ ರಂಗದಲ್ಲಿ ಮೀಸಲಾತಿ ವ್ಯವಸ್ಥೆ ಇಲ್ಲದಿರುವುದರಿಂದ ಶೋಷಿತರಿಗೆ ಅನ್ಯಾಯಗುತ್ತಿದೆ. ಪ್ರತಿಯೊಂದು ಜಾತಿಯಲ್ಲಿ ಉಪ ಜಾತಿಯ ವಿಷ ಬೀಜ ಬಿತ್ತಿ ಪರಸ್ಪರರ ನಡುವೆ ಕಿತ್ತಾಟ ನಡೆಸುವಂತೆ ಮಾಡಲಾಗುತ್ತಿದೆ.
ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿರುವವರ ವಿರುದ್ಧ ಸಂಘಟಿತ ಹೋರಾಟಕ್ಕೆ ಎಲ್ಲರೂ ಸಿದ್ಧರಾಗಬೇಕಾಗಿದ್ದು, ದಲಿತ ಸಂಘಟನೆಗಳ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಪರಶುರಾಮ ಅರೋಲಿ ಹೇಳಿದರು.
ಸಮಿತಿ ಪದಾಧಿಕಾರಿಗಳಾದ ಶಿವಜ್ಞಾನಿ ಕಪಗಲ್, ನರಸಿಂಹ ಇಟೇಕಲ್, ಪ್ರಭುಲಿಂಗ ಮ್ಯಾಗಳಮನಿ ಉಪಸ್ಥಿತರಿದ್ದರು.