

ರಾಯಚೂರು: ಕರೊನಾ ಸೋಂಕು ಹರಡದಂತೆ ಸರ್ಕಾರ 14 ದಿನಗಳ ಜನತಾ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದರೂ ಜನರು ಬುಧವಾರ ಅನಗತ್ಯವಾಗಿ ರಸ್ತೆಗಿಳಿದಿರುವುದು ಕಂಡು ಬರುತ್ತಿತ್ತು. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರ ತಪಾಸಣೆ ನಡೆಸಿ ಅನಗತ್ಯವಾಗಿ ಹೊರಬಂದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಬೆಳಗ್ಗೆ 6 ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದರೂ ಹಲವು ಅಂಗಡಿ ಮಾಲೀಕರು ಅವಧಿ ಮೀರಿ ವ್ಯಾಪಾರ ನಡೆಸುತ್ತಿದ್ದರಿಂದ ಪೊಲೀಸರು ತೆರಳಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುವಂತಾಯಿತು. ಜತೆಗೆ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದಿದ್ದವು. ಧ್ವನಿವರ್ಧಕಗಳ ಮೂಲಕ ಜನರು ಕರ್ಫ್ಯೂ ನಿಯಮಗಳನ್ನು ಪಾಲಿಸುವಂತೆ ಹಾಗೂ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಪ್ರಚಾರ ನಡೆಸಿದ್ದರೂ ಜನರು ಅದಕ್ಕೆ ಸ್ಪಂದಿಸಲಿಲ್ಲ. ಇದರಿಂದ ಪೊಲೀಸರು ವಾಹನ ಚಾಲಕರಿಗೆ ತರಾಟೆಗೆ ತೆಗೆದುಕೊಂಡು ಕೆಲವು ವಾಹನಗಳನ್ನು ವಾಪಸ್ ಕಳುಹಿಸಿದರು.
ಕಿರಾಣಿ, ತರಕಾರಿ, ಹಣ್ಣು ಮುಂತಾದ ಅಗತ್ಯವಸ್ತುಗಳ ಅಂಗಡಿಗಳು ಬೆಳಗಿನ ಅವಧಿಯಲ್ಲಿ ತೆರೆದಿದ್ದು, ಅವುಗಳನ್ನು 10 ಗಂಟೆ ನಂತರ ಮುಚ್ಚಿಸಲಾಯಿತು. ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದ್ದರಿಂದ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಸಾರಿಗೆ ಸಂಸ್ಥೆ ಬಸ್ ಹಾಗೂ ಆಟೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಕೇಂದ್ರ ಬಸ್ ನಿಲ್ದಾಣದ ಪ್ರವೇಶ ದ್ವಾರ ಮತ್ತು ಸಂಚಾರ ಮಾರ್ಗಗಳನ್ನು ಬಂದ್ ಮಾಡಿ ಜನರು ಒಳಗೆ ಪ್ರವೇಶಿಸದಂತೆ ಟಿನ್ ಶೀಟ್‌ಗಳನ್ನು ಹಾಕಿ ಮುಚ್ಚಲಾಗಿತ್ತು. ಖಾಸಗಿ ವಾಹನಗಳ ಓಡಾಟವೂ ಅತ್ಯಂತ ಕಡಿಮೆಯಾಗಿತ್ತು.
ಅನಗತ್ಯವಾಗಿ ಸಂಚರಿಸುವ ವಾಹನಗಳ ಓಡಾಟ ತಡೆಯುವ ನಿಟ್ಟಿನಲ್ಲಿ ಹಲವು ರಸ್ತೆಗಳನ್ನು ಕಬ್ಬಿಣದ ಸರಳುಗಳನ್ನು ಹಾಕಿ ಸಂಪೂರ್ಣ ಬಂದ್ ಮಾಡಲಾಗಿದ್ದು, ಜನರು ಪ್ರಮುಖ ರಸ್ತೆಗಳಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.