ಸಮರ್ಪಕವಾಗಿ ಬರ ಪರಿಹಾರ, ವಿಮೆ ಹಣ ನೀಡುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

oplus_2
oplus_2
Published on

ರಾಯಚೂರು: ರಾಜ್ಯದ 192 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು 2023-24ನೇ ಸಾಲಿನಲ್ಲಿ ಘೊಷಣೆ ಮಾಡಿದ್ದು, ಸಮರ್ಪಕವಾಗಿ ರೈತರಿಗೆ ಬರಗಾಲ ಪರಿಹಾರದ ಹಣ ದೊರೆತಿಲ್ಲ. ಇದಲ್ಲದೇ ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಫಸಲ್ ಭಿಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಪ್ರಿಮಿಯಂ ತುಂಬಿದ ರೈತರ ಖಾತೆಗಳಿಗೆ ವಿಮೆಯ ಹಣ ಜಮಾ ಮಾಡದೇ ದಲ್ಲಾಳಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ. ಅದೇ ಸಾಲಿನಲ್ಲಿ ಬರಗಾಲ ಎಂದು ಘೊಷಣೆಯಾಗಿದ್ದು, ಬರ ಪರಿಹಾರವೂ ಸಮರ್ಪಕವಾಗಿ ಸಿಕ್ಕಿಲ್ಲ. ಪ್ರಸ್ತುತ ವರ್ಷದಲ್ಲಿ ಅತಿಯಾದ ಮಳೆಯಿಂದಾಗಿ ನದಿ, ಹಳ್ಳ ಮತ್ತು ತಗ್ಗು ಪ್ರದೇಶಗಳಲ್ಲಿನ ನೀರು ಹೊಲಗಳಿಗೆ ನುಗ್ಗಿ ಅತಿಯಾದ ಬೆಳೆಹಾನಿಯಾಗಿದೆ. ವಿಮೆ ಹಣ ರೈತರಿಗೆ ಸಿಗದೇ ದಲ್ಲಾಳಿಗಳ ಖಾತೆಗೆ ಜಮಾ ಮಾಡಿರುವ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೆ ತಂದರೂ ಕೇವಲ ಎಫ್‌ಐಆರ್ ಹಾಕಿ ಕೇಸು ಮುಚ್ಚಿಹಾಕಲಾಗಿದೆ ಎಂದು ಅಸಮದಾನ ವ್ಯಕ್ತಪಡಿಸಲಾಯಿತು.

ಕೂಡಲೇ ರಾಜ್ಯ ಸರ್ಕಾರ ಅತಿವೃಷ್ಠಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ರೈತರ ಪಂಪ್‌ಸೆಟ್ ಹಾಗೂ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿದ ಹತ್ತಿ ಬೆಳೆಯ ಬೆಂಬಲ ಬೆಲೆ ಕಡಿಮೆಯಿದ್ದು, ಕನಿಷ್ಟ 2000ರೂ.ಯಂತೆ ಹತ್ತಿ ಬೆಳೆಗೆ ಪ್ರೋತ್ಸಾಹ ಧನ ನಿಗದಿಪಡಿಸಿ ಸರ್ಕಾರವೇ ಖರೀದಿ ಮಾಡಬೇಕು. ರೈತರ ಜಮೀನುಗಳನ್ನು ವಕ್ಭ್ ಬೋರ್ಡ್ ನಿಂದ ಕಬಳಿಸಲಾಗುತ್ತಿದ್ದು, ಕೂಡಲೇ ರೈತರ ಪಹಣಿಗಳಲ್ಲಿ ಕಾಲಂ ನಂ.11ರಲ್ಲಿ ನಮೂದಾಗಿರುವ ವಕ್ಫ್ ಬೋರ್ಡ್ ಎಂಬ ಹೆಸರನ್ನು ತೆಗೆದುಹಾಕಬೇಕು. ಕೃಷಿ ಮಾರುಕಟ್ಟೆಗಳಲ್ಲಿ ರೈತರ ಉತ್ಪನ್ನಗಳನ್ನು ಸ್ಯಂಪಲ್ ತೆಗೆದುಕೊಳ್ಳುವ ನೆಪದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು.

ನಾರಾಯಣಪುರ ಬಲದಂಡೆ ನಾಲೆಯಿಂದ ಹಿಂಗಾರು ಬೆಳೆಗೆ ನೀರನ್ನು ಒದಗಿಸಲು ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಕರೆಯುವ ಮುನ್ನ ರೈತರ ಸಲಹೆಗಳನ್ನು ತೆಗೆದುಕೊಳ್ಳಬೇಕು. ನಾರಾಯಣಪುರ ಬಲದಂಡೆ ಮತ್ತು ರಾಂಪೂರು ಏತ ನೀರಾವರಿ ಯೋಜನೆಯಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಬಾಕಿ ಉಳಿದಿರುವ ಭೂ ಪರಿಹಾರದ ಹಣವನ್ನು ಪಾವತಿಸಬೇಕು ಜಿಲ್ಲೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಜತೆಗೆ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಕಟ್ಟಡಗಳ ದುರಸ್ತಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರವೇ ರೈತ ಮುಖಂಡರ ಹಾಗೂ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಜ್ಯ ಉಪಾಧ್ಯಕ್ಷರಾದ ಅಮರಣ್ಣ ಗುಡಿಹಾಳ, ದೊಡ್ಡ ಬಸನಗೌಡ ಬಲ್ಲಟಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಜಿಲ್ಲಾ ಗೌರವಾಧ್ಯಕ್ಷ ಮಲ್ಲಣ್ಣ ದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಾರೆಡ್ಡಿ ಗೌಡ, ಪ್ರಮುಖರಾದ ಬಸವರಾಜ ಮಾಲಿ ಪಾಟೀಲ್, ಹನುಮಗೌಡ, ವೀರೇಶ, ಸಿದ್ದಯ್ಯ ಸ್ವಾಮಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net