

ರಾಯಚೂರು: ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ವಾರಾಂತ್ಯದ ಎರಡು ದಿನ ಕರ್ಫ್ಯೂ ಜಾರಿಗೊಳಿಸಿದ್ದರೂ ಶನಿವಾರ ಜಿಲ್ಲೆಯಲ್ಲಿ ಜನರು ಅನವಶ್ಯಕವಾಗಿ ಓಡಾಡುತ್ತಿದ್ದರು. ಇಂಥವರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದರು. ಅವಶ್ಯಕತೆಯಿದ್ದು ಹೋಗುತ್ತಿರುವ ವಾಹನಗಳನ್ನು ಮಾತ್ರ ಸಂಚಾರಕ್ಕೆ ಅವಕಾಶ ಕೊಡುತ್ತಿದ್ದು, ಅಗತ್ಯ ಸೇವೆಗಳಲ್ಲಿ ತೊಡಗಿರುವ ಸಿಬ್ಬಂದಿಯನ್ನು ವಿಚಾರಿಸಿ ಕಳುಹಿಸುತ್ತಿದ್ದರು.
ಬೆಳಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ನಂತರದಲ್ಲಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ಮಾಸ್ಕ್ ಧರಿಸದ ಹಾಗೂ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ದಂಡ ವಿಧಿಸಲಾಯಿತು. ಕೆಲವು ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ದ್ವಿಚಕ್ರವಾಹನದಲ್ಲಿ ಬಂದಿದ್ದ ಯುವಕರು ಹಿಡಿದು ಅವರನ್ನು ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡುವ ಮೂಲಕ ಅನಗತ್ಯವಾಗಿ ಓಡಾಟದಂತೆ ಬುದ್ದಿ ಮಾತು ಹೇಳಿ ಕಳುಹಿಸಲಾಯಿತು. ಮಧ್ಯಾಹ್ನದ ನಂತರದಲ್ಲಿ ಜನರ ಓಡಾಟ ಕಡಿಮೆಯಾಯಿತು.
ಪೊಲೀಸರ ಕಟ್ಟು ನಿಟ್ಟಿನ ಕ್ರಮದಿಂದಾಗಿ ಮಧ್ಯಾಹ್ನದ ನಂತರದಲ್ಲಿ ಜನರು ಹೊರಬರದಿರುವುದರಿಂದ ಸದಾ ವಾಹನ ಸಂಚಾರದಿಂದ ತುಂಬಿರುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರಾಫ್ ಬಜಾರ್, ಬಟ್ಟೆ ಬಜಾರ್ ಮತ್ತು ಕಿರಾಣಿ ಬಜಾರ್‌ನಲ್ಲಿ ಜನ ಸಂಚಾರವೇ ಇರಲಿಲ್ಲ.
ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭವಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆಯೂ ಇಲ್ಲದ ಕಾರಣ ಹಲವರು ಊಟಕ್ಕಾಗಿ ಪರದಾಡಿದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂಗೆ ಮಧ್ಯಾಹ್ನದವರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಧ್ಯಾಹ್ನದ ನಂತರ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು.
ವೈದ್ಯರೊಂದಿಗೆ ದುರ್ವರ್ತನೆ: ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೈದ್ಯ ದಂಪತಿಯೊಂದಿಗೆ ಪೊಲೀಸರು ದುರ್ವರ್ತನೆ ತೋರಿರುವುದಕ್ಕೆ ವೈದ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ತಜ್ಞ ಡಾ.ವಿಜಯ ಮಹಾಂತೇಶ ಮತ್ತು ಪತ್ನಿ ರಿಮ್ಸ್‌ನಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿರುವಾಗ ನೇತಾಜಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ದುರ್ವರ್ತನೆ ತೋರುವುದರ ಜತೆಗೆ ಹಲ್ಲೆಗೆ ಯತ್ನಿಸಿದರು ಎಂದು ದೂರಲಾಗಿದೆ. ಈ ಕುರಿತು ಐಎಂಎಗೆ ವೈದ್ಯ ದಂಪತಿ ದೂರು ನೀಡಿದ್ದಾರೆ.