

ರಾಯಚೂರು: ದೇಶ ಮತ್ತು ಸಮಾಜವನ್ನು ರಕ್ಷಣೆ ಮಾಡುವ ಕೆಲಸ ಸೈನಿಕರು ಹಾಗೂ ಪೊಲೀಸರಿಗೆ ಮಾತ್ರ ಸಿಮೀತವಲ್ಲ. ಅದು ನಮ್ಮ ಮತ್ತು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದರು.
ಸ್ಥಳೀಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಕ್ಕಾಗಿ ಜೀವ ಕಳೆದುಕೊಂಡ ಹುತಾತ್ಮರ ಸೇವೆ ಅವಿಸ್ಮರಣೀಯವಾಗಿದ್ದು, ತ್ಯಾಗಿಗಳಾದವರು ಸ್ಮರಣೀಯವಾಗಿ ಉಳಿಯುತ್ತಾರೆ ಎಂದರು.
ನಮ್ಮ ಜವಾಬ್ದಾರಿಯನ್ನು ನಾವು ಮರೆಯುತ್ತಿದ್ದೇವೆ. ಸೈನಿಕರು ಮತ್ತು ಪೊಲೀಸರಿಂದ ರಕ್ಷಣೆಯನ್ನು ನಿರೀಕ್ಷಿಸುತ್ತೇವೆ. ದೇಶ, ಸಮಾಜದ ರಕ್ಷಣೆಯಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವುದನ್ನು ಮರೆಯುತ್ತಿದ್ದೇವೆ. ಜಾಗೃತಿ ಕೊರತೆಯಿಂದಾಗಿ ನಮ್ಮ ಜವಾಬ್ದಾರಿಯ ಬಗ್ಗೆ ನಮಗೆ ಅರಿವು ಇಲ್ಲದಂತಾಗಿದೆ ಎಂದರು.
ನಮ್ಮ ಪಕ್ಕದಲ್ಲಿಯೇ ಶತೃಗಳಿದ್ದಾರೆ. ಚೀನಾ, ಪಾಕಿಸ್ತಾನ ನಿರಂತರವಾಗಿ ದೇಶದ ಮೇಲೆ ದಾಳಿ ನಡೆಸುತ್ತಿವೆ. ರಕ್ಷಣೆಗೆ ನಿಂತ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಸಹ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಿರಂತರವಾಗಿ ಸೇವೆ ಮಾಡುತ್ತಿದ್ದು, ದುಷ್ಟ ಶಕ್ತಿಗಳಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಗೌಡ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಮ್ ಮಾತನಾಡಿ, ಸಮಾಜ, ಜನರ ರಕ್ಷಣೆಗಾಗಿ ಪ್ರತಿ ವರ್ಷ ಹಲವು ಪೊಲೀಸರು ಪ್ರಾಣ ತ್ಯಾಗ ಮಾಡಿದ್ದಾರೆ. ಕೋವಿಡ್ ಸಂದರ್ಭ 100ಕ್ಕೂ ಹೆಚ್ಚು ಪೊಲೀಸರು ಜೀವ ಕಳೆದುಕೊಂಡಿದ್ದಾರೆ. ಜನರ ಪ್ರಾಣ, ಆಸ್ತಿ ರಕ್ಷಣೆ ಕೆಲಸ ಮಾಡುತ್ತಿರುವ ಪೊಲೀಸರಿಗೆ ಜನರು ಸಹಕಾರ ನೀಡುವ ಮೂಲಕ ಪ್ರೇರಣೆ ನೀಡುವ ಕೆಲಸ ಮಾಡಬೇಕು ಎಂದರು.
ಪೊಲೀಸ್ ಹುತಾತ್ಮಕ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಜಿಲ್ಲೆಗೆ ನೂತನ ಎಸ್ಪಿಗಾಗಿ ವರ್ಗಾವಣೆಗೊಂಡಿರುವ ಬಿ.ನಿಕಿಲ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್ಪಿ ಶಿವನಗೌಡ ಪಾಟೀಲ್ ಹಾಗೂ ಅಧಿಕಾರಿಗಳು ಇದ್ದರು.