ನಿಗದಿ ಮಾಡಿದ ಹತ್ತಿ ದರ ಕಡಿತ ಸಲ್ಲ; ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹ, ಗಂಜ್‌ನಲ್ಲಿ ಪ್ರತಿಭಟನೆ

29012021 Raichur Formars protest
Published on

ರಾಯಚೂರು: ಮಾರುಕಟ್ಟೆಯಲ್ಲಿ ಹತ್ತಿಗೆ ದರ ನಿಗದಿ ಮಾಡಿದ ಬಳಿಕ ಅದರ ಕಡಿತ ಮಾಡುವುದನ್ನು ನಿಲ್ಲಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಶುಕ್ರವಾರ ರಾಜೇಂದ್ರ ಗಂಜ್‌ನಲ್ಲಿ ಪ್ರತಿಭಟನೆ ನಡೆಸಿತು.

ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿಗೆ ಮನವಿ ಸಲ್ಲಿಸಿತು. ಹತ್ತಿ ಮಾರುಕಟ್ಟೆಯಲ್ಲಿ ದರ ನಿಗದಿ ಪಡಿಸಿ ಖರೀದಿ ಪ್ರಕ್ರಿಯೆ ಮುಗಿದು ಮಿಲ್‌ಗೆ ತೆಗೆದುಕೊಂಡು ಹೋದ ನಂತರ ಕ್ವಿಂಟಾಲ್‌ಗೆ 100 ರಿಂದ 150 ರೂ.ವರೆಗೆ ದರವನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರಿಗೆ ಹತ್ತಿ ವಾಪಸ್ ತೆಗೆದುಕೊಂಡು ಹೋಗುವಂತೆ ಬೆದರಿಕೆ ಹಾಕಲಾಗುತ್ತಿದೆ. ಹತ್ತಿಯನ್ನು ಮಿಲ್‌ಗೆ ತೆಗೆದುಕೊಂಡು ಹೋದ ನಂತರದಲ್ಲಿ ಅನ್‌ಲೋಡಿಂಗ್ ವೆಚ್ಚವನ್ನು ರೈತರ ಮೇಲೆ ಹಾಕುತ್ತಿರುವುದರಿಂದ ರೈತರಿಗೆ ಆರ್ಥಿಕ ನಷ್ಟವುಂಟಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿತು.

ದರ ನಿಗದಿ ನಂತರ ಅದರ ಕಡಿತ ನಿಲ್ಲಿಸಬೇಕು. ದರ ಕಡಿತ ಮಾಡುವ ಮಿಲ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೃಷಿ ಉತ್ಪನ್ನಗಳ ಸ್ಯಾಂಪಲ್ ತೆಗೆದುಕೊಂಡು ಹೋಗುವುದನ್ನು ತಡೆಯಬೇಕು. ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಎಪಿಎಂಸಿಗೆ ಮಾರಾಟಕ್ಕೆ ತಂದ ಉತ್ಪನ್ನಗಳ ಸ್ಯಾಂಪಲ್ ಪಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಧಿಕಾರಿಗಳಾದ ಜಯಪ್ಪಸ್ವಾಮಿ, ನರಸರೆಡ್ಡಿ, ಕೆ.ವೀರೇಶಗೌಡ, ನರಸಪ್ಪ ಹೊಕ್ರಾಣಿ, ಹುಲಿಗಪ್ಪ ಜಾಲಿಬೆಂಚಿ, ದೇವರಾಜ ನಾಯಕ, ಮಲ್ಲಿಕಾರ್ಜುನ, ದೇವಪುತ್ರ, ಶ್ರೀಧರ, ರಮೇಶ, ತಿಮ್ಮಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net