ಹತ್ತಿ ಬೆಳೆಗೆ ರಬ್ಬರ್ ಹುಳು ಕಾಟ: ಕೀಟಬಾದೆಯಿಂದ ಕಂಗಾಲಾದ ರೈತರು

IMG_20241010_194318
Published on

ರಾಯಚೂರು: ಮುಂಗಾರುವಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತನು ನಗೆ ಬೀರುವ ಹೊತ್ತಿನಲ್ಲಿ ರಾಯಚೂರು ಜಿಲ್ಲೆ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ಬೆಳೆದ ಹತ್ತಿ ಬೆಳೆಗೆ ರಬ್ಬರ್ ಹುಳುವಿನ ಕೀಟಬಾದೆ ಕಾಡುತ್ತಿದ್ದು ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಅತಿವೃಷ್ಠಿಯಿಂದ ಜಿಲ್ಲೆಯ ಕೆಲವೆಡೆ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸಿದ್ದರು. ಅತಿವೃಷ್ಠಿಯಾಗದ ಪ್ರದೇಶದ ರೈತರಾದರೂ ಖುಷಿಯಿಂದ ಇದ್ದಾರೆ ಎನ್ನುವಷ್ಟರಲ್ಲಿ ಇದೀಗ ಹತ್ತಿಗೆ ರಬ್ಬರ್ ಹುಳುವಿನ ಕಾಟ ಎದುರಾಗಿದ್ದು, ಬೆಳೆಯನ್ನು ಈ ಹುಳುಗಳು ಸಂಪೂರ್ಣವಾಗಿ ನಾಶಪಡಿಸುತ್ತಿವೆ.

ಜಿಲ್ಲೆಯ ದೇವದುರ್ಗ ತಾಲೂಕು ಹಾಗೂ ರಾಯಚೂರು ತಾಲೂಕಿನಲ್ಲಿ ರೈತರು ಬೆಳೆದ ಹತ್ತಿಗೆ ಲದ್ದಿ ಹುಳುಗಳು ಅತಿ ಹೆಚ್ಚು ದಾಳಿ ನಡೆಸಿವೆ. ಈ ಹುಳುಗಳು ಎಲೆ, ಕಾಯಿ ತಿನ್ನುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಬೆಳೆಯನ್ನು ನಾಶಪಡಿಸುವ ಸಾಮಾರ್ಥ್ಯವನ್ನು ಹೊಂದಿವೆ.

ಜಿಲ್ಲೆಯಲ್ಲಿ ಸರಿಸುಮಾರು 1.76 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು, ರಾಯಚೂರು, ದೇವದುರ್ಗ, ಮಾನ್ವಿ, ಸಿರವಾರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಹೆಚ್ಚಾಗಿ ಹತ್ತಿಯನ್ನು ಬೆಳೆದಿದ್ದಾರೆ. ಇದೀಗ ಕಾಣಿಸಿಕೊಂಡ ಕೀಟ ಬಾದೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಕಾಯಿ ಹೊಡೆಯುವ ಹತದಲ್ಲಿರುವ ಬೆಳೆಗೆ ಅಷ್ಟೇನು ಹಾನಿ ಉಂಟಾಗುವುದಿಲ್ಲ. ಆದರೆ ಹೂ ಬಿಡುವ ಹಂತದಲ್ಲಿರುವ ಬೆಳೆಗೆ ಹೆಚ್ಚಿನ ಬಾದೆ ಉಂಟಾಗುತ್ತಿದೆ. ಕೀಟಬಾದೆಗೆ ಸ್ಥಳೀಯ ಕೃಷಿ ಕ್ರಿಮಿನಾಶಕ ಅಂಗಡಿಗಳಿಗೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಹೋದಾಗ ಒದಾದ ನಂತರ ಒಂದರಂತೆ ಔಷಧಿಗಳನ್ನು ನೀಡುತ್ತಿದ್ದಾರೆಯೇ ಹೊರು ಹುಳುಗಳು ಮಾತ್ರ ಸಾಯುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟ ಶಾಸ್ತ್ರದ ತಜ್ಞರು ಮತ್ತು ವಿಜ್ಞಾನಿಗಳು ಕೀಟಬಾದೆಗೆಯ ಕುರಿತು ಸಂಶೋಧನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆನ್ನುವುದು ರೈತರ ಒತ್ತಾಯವಾಗಿದೆ.

ಹತ್ತಿ ಬೆಳೆಯ ಮೇಲೆ ದಾಳಿ ನಡೆಸಿರುವ ಈ ರಬ್ಬರ್ ಹುಳು ಕೇವಲ ತಂಪಾದ
ಹೊತ್ತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಬಿಸಿಲಿನಲ್ಲಿ ಈ ಹುಳುಗಳು ಕಾಣಿಸಿಕೊಳ್ಳುವುದಿಲ್ಲ, ಜತೆಗೆ ಈ ಹುಳುಗಳು ಎಲೆ ಕಾಯಿಗಳನ್ನು ತಿನ್ನುತ್ತಾ ತಮ್ಮ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ. ಬಲಿತಂತೆಲ್ಲ ಯಾವುದೇ ಕ್ರಿಮಿನಾಶಕ ಸಿಂಪಡಿಸಿದರೂ ಹುಳುಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಕಳೆದ 20 ವರ್ಷದಿಂದ ವ್ಯವಸಾಯ ಮಾಡುತ್ತಿರುವೆ ಆದರೆ ಹಿಂದೆಂದು ಈ ರೀತಿಯ ಹುಳುಗಳನ್ನು ಕಂಡಿಲ್ಲ. ಆರ್ಧ ಬೆಳೆಗೆ ಕೀಟಬಾದೆ ಅಂಟಿಕೊಂಡಿದ್ದು, ಕ್ರಿಮಿನಾಶಕ ಸಿಂಪಡಿಸಿ ಸಾಕಾಗಿದೆ ಹುಳುಗಳು ಮಾತ್ರ ಸಾಯುತ್ತಿಲ್ಲ. | ಸಿದ್ದನಗೌಡ ಪೊಲೀಸ್ ಪಾಟೀಲ್, ರೈತ, ಜೇಗರಕಲ್

ಹತ್ತಿ ಬೆಳೆಗೆ ಅಂಟಿಕೊಂಡಿರುವ ಕೀಟಬಾದೆಯ ಬಗ್ಗೆ ಪರಿಶೀಲಿಸಲು ಎಲ್ಲ ತಾಲೂಕುಗಳ ಸಹಾಯಕ ಕೃಷಿ ನಿದೇರ್ಶಕರಿಗೆ ಸೂಚಿಸಲಾಗಿದೆ. ಕೃಷಿ ವಿಜ್ಞಾನಿಗಳಿಗೂ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಗಮನ ಹರಿಸಲಾಗುವುದು.| ಜಯಪ್ರಕಾಶ, ಜಂಟಿ ಕೃಷಿ ನಿರ್ದೇಶಕ(ಪ್ರಭಾರ), ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net