

ರಾಯಚೂರು: ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಸಿಲುಕಿ ಕೃಷಿ ಕ್ಷೇತ್ರ ತಲ್ಲಣಗೊಂಡಿದ್ದು, ಈ ಒಳ ಸುಳಿಯಿಂದ ಹೊರಬರಲು ಹಾಗೂ ರೈತರ ಸಂಕಷ್ಟ ಪರಿಹಾರಕ್ಕೆ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಅಧ್ಯಕ್ಷ ಡಾ.ಟಿ.ಎಸ್.ಸುನೀತ್‌ಕುಮಾರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಆರ್‌ಕೆಎಸ್‌ನಿಂದ ಸೋಮವಾರ ಏರ್ಪಡಿಸಿದ್ದ ರೈತ ಕೃಷಿ ಕಾರ್ಮಿಕರ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ರೈತನೇ ದೇಶದ ಅನ್ನದಾತ ಎಂದು ಹೇಳುತ್ತಲೇ ರೈತರನ್ನು ಸಂಕಷ್ಟಕ್ಕೆ ದೂಡುವಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲ. ಆದರೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಕೈಗೆ ನಿಲುಕದಷ್ಟು ಏರಿಕೆಯಾಗುತ್ತಿದೆ. ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿರುವ ರೈತರು, ಕೃಷಿ ಕಾರ್ಮಿಕರ ಬವಣೆ ಅಂತ್ಯವಾಗುತ್ತಿಲ್ಲ. ಬದಲಾಗಿ ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಳವಾಗುತ್ತಿದೆ ಎಂದರು.
ಬೆಲೆ ಅಸಮತೋಲನದಿಂದ ರೈತನಿಗೆ ಹೂಡಿದ ಹಣ ಬಾರದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ರೈತರ ಭೂಮಿ, ನೀರು ಕಸಿದುಕೊಳ್ಳಲಾಗುತ್ತಿದೆ. ಸರ್ಕಾರ ಭಾವನಾತ್ಮಕ ವಿಷಯಗಳಿಗೆ ಕೊಡುವ ಒತ್ತನ್ನು ರೈತರ ಸಂಕಷ್ಟಗಳಿಗೆ ಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ಐಕ್ಯ ಹೋರಾಟ ನಡೆಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿನ ಗಾಂಧೀಜಿ ಪುತ್ಥಳಿಯಿಂದ ಕನ್ನಡ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಹೋರಾಟದಲ್ಲಿ ಮೃತಪಟ್ಟ ಹುತಾತ್ಮರಿಗೆ ನಮನ ಸಲ್ಲಿಸಲಾಯಿತು. ಸಂಘಟನೆ ಖಜಾಂಚಿ ವಿ.ನಾಗಮ್ಮಾಳ, ಜಿಲ್ಲಾಧ್ಯಕ್ಷ ರಾಮಣ್ಣ ಮರಕಂದಿನ್ನಿ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ, ಪದಾಧಿಕಾರಿಗಳಾದ ಮಲ್ಲನಗೌಡ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ಕಾರ್ತಿಕ ಕುರ್ಡಿ ಉಪಸ್ಥಿತರಿದ್ದರು.