ಮಾಸ್ಕ್ ಪರಿಹಾರವಲ್ಲ, ಕೈತೊಳೆಯುವುದು ಸೂಕ್ತ

13032020 Raichur Corona Awareness Meeting
Published on

ಸಭೆಯಲ್ಲಿ ಸರ್ವೇಕ್ಷಣಾಧಿಕಾರಿ ಅನಿಲಕುಮಾರ ತಾಳಿಕೋಟೆ ಸಲಹೆ | ವಿದೇಶದಿಂದ ಬಂದವರ ಬಗ್ಗೆ ಮಾಹಿತಿ ನೀಡಲು ಡಿಸಿ ಮನವಿ

ರಾಯಚೂರು: ಹೆಚ್ಚಿನ ಬಿಸಿಲಿದ್ದರೆ, ಮಾಸ್ಕ್ ಹಾಕಿಕೊಂಡ ಮಾತ್ರಕ್ಕೆ ಕರೊನಾ ವೈರಸ್ ಬರುವುದಿಲ್ಲ ಎನ್ನುವ ಅವೈಜ್ಞಾನಿಕ ವದಂತಿಗೆ ಕಿವಿಗೊಡದೆ ಸಾರ್ವಜನಿಕರು ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದರಿಂದ ಕರೊನಾ ಕೊಂಚ ಮಟ್ಟಿಗೆ ತಡೆಯಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅನಿಲಕುಮಾರ ತಾಳಿಕೋಟೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಡಿಸಿ ಆರ್.ವೆಂಕಟೇಶ ಕುಮಾರ ಅಧ್ಯಕ್ಷತೆಯಲ್ಲಿ ನಡೆದ ಕರೊನಾ ವೈರಸ್ ಜಾಗೃತಿ ಸಭೆಯಲ್ಲಿ ಮಾಹಿತಿ ನೀಡಿದರು. ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಸರಿಯಲ್ಲ. ಸೋಂಕಿತರಿದ್ದರೆ ಮನೆ ಬಿಟ್ಟು ಬರಕೂಡದು. ಅಂತವರ ಮೇಲೆ ಅಧಿಕಾರಿಗಳು ಸಮನ್ವಯತೆಯಿಂದ ನಿಗಾ ವಹಿಸಬೇಕು ಎಂದರು.

ಬೇರೆ ದೇಶದಿಂದ ಬಂದ ವ್ಯಕ್ತಿಗಳಿಂದಲ್ಲೆ ದೇಶದಲ್ಲಿ ಕರೊನಾ ವೈರಸ್ ಬರುತ್ತಿದೆ. ದೇಶದಲ್ಲಿ ಕಲಬುರಗಿಯಲ್ಲಿ ಮಾತ್ರ ವ್ಯಕ್ತಿ ಸತ್ತಿದ್ದಾನೆ. ರಾಜ್ಯದಲ್ಲಿ ಐದು ಜನರಲ್ಲಿ ಸೋಂಕು ಪತ್ತೆಯಾಗಿದೆ. 14 ದಿನಗಳ ಕಾಲ ತಪಾಸಣೆ ನಂತರವೆ ವೈರಸ್ ಪತ್ತೆಯಾಗುತ್ತಿದೆ. ಯಾವುದೇ ಔಷಧ ಪತ್ತೆಯಾಗಿಲ್ಲ. ಜಾಗೃತಿಯೊಂದೆ ಸೂಕ್ತ ಪರಿಹಾರ ಎಂದರು.

ಡಿಸಿ ಆರ್.ವೆಂಕಟೇಶ ಕುಮಾರ ಮಾತನಾಡಿ, ಈಗಾಗಲೆ ಖಾಸಗಿ ಆಸ್ಪತ್ರೆ, ವೈದ್ಯಕೀಯ ಸಂಘಗಳ ಜತೆಯಲ್ಲಿ ಸಭೆ ನಡೆಸಲಾಗಿದೆ. ಶಂಕಿತ ಲಕ್ಷಣ ಕಂಡು ಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ನಿತ್ಯ ಎರಡು ಬಾರಿ ಅವಲೋಕನ ಮಾಡಲಾಗುತ್ತಿದೆ. ವಿದೇಶದಿಂದ ಬರುವವರ ಬಗ್ಗೆ ನಮಗೆ ಮಾಹಿತಿ ಬರುತ್ತದೆ. ಹೆಚ್ಚಿನ ದರಕ್ಕೆ ಮಾಸ್ಕ್ ಮಾರಾಟ ಮಾಡಿದರೆ ಕ್ರಮ ವಹಿಸಲು ಡಿಎಚ್‌ಒಗೆ ತಾಕೀತು ಮಾಡಿದರು.

ಸಿಇಒ ಜಿ.ಲಕ್ಷ್ಮೀಕಾಂತರಡ್ಡಿ, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿಎಚ್‌ಒ ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಹಾಗೂ ಎಲ್ಲ ತಹಸಿಲ್ದಾರರು, ತಾಲೂಕು ವೈದ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಇದ್ದರು.

ವಿದೇಶದಿಂದ ಜಿಲ್ಲೆಗೆ ಬಂದ ಐವರ ಮೇಲೆ ನಿಗಾ

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿಕೆ
ರಾಯಚೂರು: ಕರೊನಾ ವೈರಸ್ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಿಗೆ ಹೋಗಿ ಬಂದ ಜಿಲ್ಲೆಯ ನಾಲ್ವರ ಆರೋಗ್ಯ ತಪಾಸಣೆ ಮಾಡುವ ಜತೆಗೆ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಸಿಂಧನೂರಿನ ಮೂವರು ಹಾಗೂ ದೇವದುರ್ಗ, ರಾಯಚೂರಿನ ಒಬ್ಬ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ವ್ಯಕ್ತಿಗಳಲ್ಲಿ ರೋಗದ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಆಗಮಿಸಿದವರ ತಪಾಸಣೆ ಮಾಡಲಾಗಿದೆ. ನಿನ್ನೆ ಇಟಲಿಗೆ ಹೋಗಿಬಂದಿದ್ದ ರಾಯಚೂರಿನ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಸಾರ್ವಜನಿಕರು ವಿದೇಶದಿಂದ ಬರುವವರ ಬಗ್ಗೆ ಆರೋಗ್ಯ ಅಧಿಕಾರಿಗೆ ಅಥವಾ 104ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶಾಲೆ, ಕಾಲೇಜುಗಳ ಬೇಸಿಗೆಯಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳುವುದನ್ನು ರದ್ದು ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net