

ರಾಯಚೂರು : ಕರೊನಾ ಸೋಂಕು ಜಾತಿ, ಧರ್ಮಕ್ಕೆ ಮಾತ್ರ ಹರಡುವ ರೋಗ ಅಲ್ಲ. ಆ ಬಗ್ಗೆ ಮೌಢ್ಯತೆ, ನಿರ್ಲಕ್ಷೃ, ಧರ್ಮದ ಲೇಪನ ಹಚ್ಚದೆ ಎಲ್ಲ ಸಮುದಾಯದವರು ಸಾಮಾಜಿಕ ಅಂತರ ಕಾಪಾಡಿಕೊಂಡು, ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುವ ಬದ್ಧತೆ ಪ್ರದರ್ಶಿಸಬೇಕು ಎಂದು ಜಿಲ್ಲೆಯ ವಿವಿಧ ಮಠಾಧೀಶರು, ಧರ್ಮ ಗುರುಗಳು, ರಾಜಕಾರಣಿಗಳು ಒಕ್ಕೋರಲಿನ ಮನವಿ ಮಾಡಿದರು.
ನಗರದ ಕೃಷಿ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಆಯೋಜಿಸಿದ್ದ ಸರ್ವಧರ್ಮಗಳ ಗುರುಗಳು ಹಾಗೂ ರಾಜಕೀಯ ಮುಖಂಡರ ಸಮನ್ವಯ ಸಭೆಯಲ್ಲಿ ಲಾಕ್‌ಡೌನ್ ಪಾಲಿಸಿ, ಕರೊನಾ ಹಬ್ಬದಂತೆ ತಡೆಯೋಣ ಎನ್ನುವ ಒಮ್ಮತದ ನಿರ್ಧಾರದ ಸಂದೇಶ ಸಾರಿದರು. ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ, ಜಿಲ್ಲಾದ್ಯಂತ ಸರ್ಕಾರದ ಸೂಚನೆಗಳಂತೆ ಜನ ಸಮುದಾಯದಲ್ಲಿ ಕರೊನಾ ಸೃಷ್ಟಿಸುವ ಭೀತಿ, ಅಪಾಯ ಮನದಟ್ಟು ಮಾಡಿಕೊಡುವಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸಮಾಜದಲ್ಲಿರುವ ಧರ್ಮದ ಗುರುಗಳ ಮಾರ್ಗದರ್ಶನ, ಮನೆಯಲ್ಲೇ ಇರಿ ಎಂದು ಭಕ್ತರು, ಆಯಾ ಸಮುದಾಯದ ಜನರಿಗೆ, ಅನುಯಾಯಿಗಳಿಗೆ ಮನವರಿಕೆ ಮಾಡಿಕೊಡಲು ಸಭೆ ಕರೆಯಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ, ಪೊಲೀಸರು ಕೈಗೊಂಡಿರುವ ಕ್ರಮಗಳಿಗೆ ಎಲ್ಲ ಸಮುದಾಯದ ಜನ ಕೈ ಜೋಡಿಸಿ, ಕರೊನಾದಿಂದ ಜಿಲ್ಲೆ ಮುಕ್ತವಾಗಿರುವಂತೆ ಮಾಡಲು ಸಹಕರಿಸಬೇಕು ಎಂದು ಮಠಾಧೀಶರು, ಧರ್ಮ ಗುರುಗಳು ಸಾಂಘಿಕವಾಗಿ ಮನವಿ ಮಾಡಿದರು.
ಮನವಿ: ಸ್ವಾಮೀಜಿಗಳು, ಧರ್ಮಗುರುಗಳು ಸಾಮಾಜಿಕ ಜಾಲತಾಣ ಬಳಸಿ ಭಕ್ತರಿಗೆ, ಅನುಯಾಯಿಗಳಿಗೆ ಲಾಕ್‌ಡೌನ್, ಸಾಮಾಜಿಕ ಅಂತರ ಕಾಪಾಡುವಂತೆ ಸಂದೇಶ ತಲುಪಿಸುವಂತೆ ಶಾಸಕರಾದ ಡಾ. ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಎಂಎಲ್ಸಿ ಎನ್.ಎಸ್.ಬೋಸರಾಜು ಸೇರಿ ವಿವಿಧ ಪಕ್ಷದ ಅಧ್ಯಕ್ಷರು, ಸಮುದಾಯದ ಮುಖಂಡರು ಮನವಿ ಮಾಡಿದರು.
ವಿವಿಧ ಮಠಾಧೀಶರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬೂದಿಬಸವೇಶ್ವರ ಸ್ವಾಮೀಜಿ, ನವಲಕಲ್‌ನ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಾನ್ವಿಯ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಲೋಗಲ್‌ನ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮೌಲ್ವಿಗಳಾದ ಅಲ್ಲಾಜ್ ಹಫೀಜ್ ರಫೆಲ್ ಅಹ್ಮದ್ ಸಾಹೇಬ್, ಅಲಿಜನಾಬ್ ಮೌಲಾನಾ ಫರೂಕ್ ಸಾಹೇಬ್, ರೆವೆರೆಂಡ್‌ಪೌಲರಾಜ ಆನಂದ ಹೊಸೂರು ಇದ್ದರು.