ಕರೊನಾ ಭೀತಿ ಮರೆತು ಅಗತ್ಯ ವಸ್ತುಗಳ ಕೊಳ್ಳಲು ಮುಗಿಬಿದ್ದ ರಾಯಚೂರಿನ ಜನ

04062021 Raichur Market in peoples
Published on

ರಾಯಚೂರು: ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ನಂತರದಲ್ಲಿ ಒಂದು ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುತ್ತಿದ್ದು, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಸಂದರ್ಭ ಸಾರ್ವಜನಿಕರು ಕರೊನಾ ಭೀತಿ ಮರೆತು ಖರೀದಿಗೆ ಮುಗಿಬಿದ್ದರು.

ಕಿರಾಣಿ ಅಂಗಡಿಗಳ ಮುಂದೆ ಹಾಗೂ ತರಕಾರಿ ಮಾರಾಟದ ಸ್ಥಳಗಳಲ್ಲಿ ಪರಸ್ಪರ ಅಂತರ ಮರೆತು ಖರೀದಿ ನಡೆಸಿದರು. ಬಟ್ಟೆ ಬಜಾರ್, ಕಿರಾಣಿ ಬಜಾರ್, ಬಸವನಬಾವಿ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆ ಸ್ಥಳದಲ್ಲಿ ಜನ ಜಂಗುಳಿ ನೆರೆದಿತ್ತು. ಜನರು ತಮ್ಮ ಬಡಾವಣೆಗಳಲ್ಲಿಯೇ ಖರೀದಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದರೂ, ವಾಹನಗಳಲ್ಲಿ ಮಾರುಕಟ್ಟೆಗೆ ಆಗಮಿಸಿದ್ದರು. ಇದರಿಂದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಲಾಕ್‌ಡೌನ್‌ಗೆ ಅರ್ಥವಿಲ್ಲದಂತಾಗಿತ್ತು.

ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಿದ್ದರೂ ಬಟ್ಟೆ ಅಂಗಡಿ, ಪ್ಲಾಸ್ಟಿಕ್ ಸಾಮಗ್ರಿ ಸೇರಿದಂತೆ ಇತರ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಲಾಯಿತು. ಬಹುತೇಕ ಅಂಗಡಿಗಳ ಶಟರ್ ಮುಚ್ಚಲಾಗಿದ್ದರೂ ಒಳಗಡೆ 20ಕ್ಕೂ ಹೆಚ್ಚು ಜನರನ್ನು ಸೇರಿಸಿ ಬಟ್ಟೆ ಖರೀದಿಗೆ ಅವಕಾಶ ನೀಡಲಾಗಿತ್ತು.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆ ಕಂಡು ಬರುತ್ತಿರುವ ಸಂದರ್ಭ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಜಾಗೃತಿ ವಹಿಸುವ ಬದಲು, ಜನರ ಅನುಕೂಲಕ್ಕಾಗಿ ಮಾಡಲಾದ ಲಾಕ್‌ಡೌನ್ ಸಡಿಲಿಕೆ ಸಂದರ್ಭದಲ್ಲಿ ಮೈಮರೆತು ಓಡಾಡುತ್ತಿರುವುದು ಸೋಂಕಿನ ಪ್ರಮಾಣ ಹೆಚ್ಚಳವಾಗುವ ಆತಂಕ ತಂದಿದೆ.

ಮದ್ಯ ಮಾರಾಟದ ಲಾಬಿ: ಮೂರು ದಿನಗಳ ಲಾಕ್‌ಡೌನ್ ನಂತರ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಅದರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮದ್ಯ ಮಾರಾಟದ ಅಂಗಡಿಗಳ ಮಾಲೀಕರು, ಮದ್ಯ ಖರೀದಿಗೆ ಹೋದವರಿಗೆ ಸ್ಟಾಕ್ ಬಂದಿಲ್ಲ ಎನ್ನುವ ನೆಪ ಹೇಳಿ, ನಂತರದಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ದೇವದುರ್ಗ ತಾಲೂಕಿನ ಗಬ್ಬೂರು ಸೇರಿದಂತೆ ಹಲವೆಡೆ ಮದ್ಯ ಮಾರಾಟದ ಅಂಗಡಿಗಳಲ್ಲಿ ನಿಗದಿಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net