

ರಾಯಚೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಲಿಕೆ ಮಾಡಲಾಗುತ್ತಿದ್ದು, ಜೂ.14 ರಿಂದ 20ರವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕರೊನಾ ಸೋಂಕಿನ ಪ್ರಮಾಣ ಶೇ.5ಕ್ಕಿಂತ ಕೆಳಗಿದ್ದು, ಪ್ರಸ್ತುತ ಶೇ.2 ರಿಂದ 3ರಷಿದೆ. ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್‌ನಲ್ಲಿ ಸಡಲಿಕೆ ಮಾಡಲಾಗುತ್ತಿದೆ ಎಂದರು.
ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿ ನಂತರ ಅಗತ್ಯವಸ್ತು ಖರೀದಿಗೆ ಅವಕಾಶ ನೀಡಿದ್ದು ಹಾಗೂ ಜಿಲ್ಲಾಡಳಿತದ ನಡೆ ಹಳ್ಳಿಗಳ ಕಡೆ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಕೇವಲ ಕಿರಾಣಿ, ತರಕಾರಿ, ಹಣ್ಣು, ಹಾಲು, ಮಾಂಸ, ಗೊಬ್ಬರ, ಬಿತ್ತನೆ ಬೀಜ, ಸ್ಟೀಲ್, ಸಿಮೆಂಟ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದ್ದು, ಇತರ ಅಂಗಡಿಗಳನ್ನು ತೆರೆಯಲು ನಿಷೇಧಿಸಲಾಗಿದೆ.
ಹೋಟೆಲ್, ಮದ್ಯದ ಅಂಗಡಿಗಳಲ್ಲಿ ಕೇವಲ ಪಾರ್ಸಲ್‌ಗೆ ಅವಕಾಶ ನೀಡಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿಗಳೂ ಕೂಡಾ ಇದೇ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸಲಿವೆ. ಕಾರ್ಖಾನೆಗಳಲ್ಲಿ ಶೇ.50 ಸಿಬ್ಬಂದಿಯನ್ನು ಮಾತ್ರ ಬಳಸಿಕೊಂಡು ಕಾರ್ಯನಿರ್ವಹಿಸಬಹುದಾಗಿದೆ.
ಟ್ಯಾಕ್ಸಿ, ಆಟೋಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದ್ದು, ಶನಿವಾರ ಮತ್ತು ಭಾನುವಾರ ಅಗತ್ಯವಸ್ತುಗಳ ಅಂಗಡಿ ತೆರೆದಿದ್ದರೂ ಜನರು ಹೊರಗೆ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಮದುವೆ, ಜಾತ್ರೆ, ಸಂತೆಗಳನ್ನು ನಡೆಸುವಂತಿಲ್ಲ. ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಆಂದೋಲನ ರೀತಿಯಲ್ಲಿ ನಡೆಸಲಾಗುತ್ತಿದ್ದು, ಪ್ರತಿ ಗ್ರಾ.ಪಂ.ಗಳಲ್ಲಿ ಕನಿಷ್ಟ 50 ಜನರಿಗೆ ಪ್ರತಿನಿತ್ಯ ಲಸಿಕೆ ಹಾಕುವ ಗುರಿಯನ್ನು ನೀಡಲಾಗಿದೆ. ಪ್ರತಿನಿತ್ಯ 10 ಸಾವಿರ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಸಿಕೆಗಳನ್ನು ಹಾಕಲಾಗುತ್ತಿದೆ. 2ನೇ ಡೋಸ್ ಪಡೆಯದವರಿಗೆ ಕರೆ ಮಾಡಿ ಲಸಿಕೆ ಪಡೆಯುವಂತೆ ತಿಳಿಸಲಾಗುತ್ತಿದೆ ಎಂದು ಆರ್.ವೆಂಕಟೇಶಕುಮಾರ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ ಇದ್ದರು.