ಸಹಕಾರದಿಂದ ಅಪರಾಧ ತಡೆಗೆ ನಿರ್ಧಾರ

060522 Meeting of Police Officers in Telangana, Andhra Pradesh, Raichur District
ಶಕ್ತಿನಗರದ ಅತಿಥಿಗೃಹದಲ್ಲಿ ಶುಕ್ರವಾರ ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಯಚೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ರಾಯಚೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಉದ್ಘಾಟಿಸಿದರು.
Published on

ರಾಯಚೂರು: ಶಕ್ತಿನಗರದ ಶಕ್ತಿ ಅತಿಥಿ ಗೃಹದಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಯಚೂರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿ, ಪರಸ್ಪರ ಸಹಕಾರ ಮತ್ತು ಕಾರ್ಯಾಚರಣೆ ಮೂಲಕ ಅಪರಾಧ ತಡೆಗಟ್ಟುವ ತೀರ್ಮಾನ ಕೈಗೊಂಡರು.

ಸಭೆಗೆ ಚಾಲನೆ ನೀಡಿದ ರಾಯಚೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ, ಕೋವಿಡ್‌ನಿಂದ ಎರಡು ವರ್ಷಗಳಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿತ್ತು. ಪರಿಸ್ಥಿತಿ ಸಹಜತೆಗೆ ಮರಳುತ್ತಿದ್ದಂತೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳವಿನ ಪ್ರಕರಣಗಳು ಹೆಚ್ಚಾಗಿವೆ. ಅಂತಾರಾಜ್ಯ ದರೋಡೆಕೋರರು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಅಪರಾಧ ಕೃತ್ಯ ಎಸಗಿದವರು ನೆರೆಯ ರಾಜ್ಯಗಳಿಗೆ ತೆರಳಿ ಅಡಗಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪರಸ್ಪರ ಸಹಕಾರದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಡಿಸಿಐಬಿ ಡಿವೈಎಸ್ಪಿ ವೆಂಕಟೇಶ್ವರ ಮಾತನಾಡಿ, ಮೂರು ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಅಪರಾಧ ಚಟುವಟಿಕೆ ಮಟ್ಟ ಹಾಕಲು ಅಪರಾಧಿಗಳ ಹಿನ್ನೆಲೆಯ ಮಾಹಿತಿ ಹಂಚಿಕೊಳ್ಳಲು ಮುಂದಾಗಬೇಕು. ಇದರಿಂದ ಅವರ ಪತ್ತೆಗೆ ಅನುಕೂಲವಾಗಲಿದೆ ಎಂದರು.

ನಂತರ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ನಡೆದ ಅಪರಾಧ ಪ್ರಕರಣಗಳ ಕುರಿತು ಹಾಗೂ ಅಪರಾಧಿಗಳ ಕುರಿತು ಸಭೆಗೆ ಮಾಹಿತಿ ನೀಡಿ, ಅಪರಾಧ ತಡೆ ಮತ್ತು ಅಪರಾಧಿಗಳ ಪತ್ತೆಗೆ ಪರಸ್ಪರ ಸಹಕಾರ ನೀಡಲು ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net