

ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ನಡೆಸಲಾಗುತ್ತಿರುವ ಧರಣಿ ಸೋಮವಾರ 200 ದಿನಕ್ಕೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನಗರದ ಕರ್ನಾಟಕ ಸಂಘದಿಂದ ಹೋರಾಟದ ಸ್ಥಳದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ನಿರಂತರ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳಿಂದ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮನೆ-ಮನಗಳಿಗೆ ಮುಟ್ಟಿಸಲು ನಗರದ ಪ್ರತಿ ಮನೆಗೆ ತೆರಳಿ ಹೋರಾಟದ ಮಹತ್ವನ್ನು ತಿಳಿಸಿ ಆಹ್ವಾನಿಸುವ ಕೆಲಸ ಮಾಡಲಾಗುವುದು ಎಂದರು.
ಹೋರಾಟದ ಸ್ಥಳಕ್ಕೆ ನಾಲ್ಕು ಬಾರಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮತ್ತು ಜಿಲ್ಲೆಯ ಶಾಸಕರು ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋರಾಟಗಾರರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಾಲಹರಣ ಮಾಡುತ್ತಿದ್ದಾರೆ.
ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿಯೂ ನಿರ್ಣಯ ತೆಗೆದುಕೊಂಡಿಲ್ಲ. ಐಐಟಿ ರೀತಿಯಲ್ಲಿ ಏಮ್ಸ್ ಮಂಜೂರು ಮಾಡುವಲ್ಲಿಯೂ ಜಿಲ್ಲೆಗೆ ಅನ್ಯಾಯವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಉತ್ಸವ ಮೂರ್ತಿಯಾಗಿರುವ ಸಂಸದ ಅಮರೇಶ್ವರ ನಾಯಕ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿಲ್ಲ.
ಈ ನಿಟ್ಟಿನಲ್ಲಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಸೋಮವಾರ ಮೆರವಣಿಗೆಗೆ ಹಿರಿಯ ಸಾಹಿತಿ ವೀರಹನುಮಾನ ಚಾಲನೆ ನೀಡಲಿದ್ದಾರೆ ಎಂದು ಡಾ.ಬಸವರಾಜ ಕಳಸ ತಿಳಿಸಿದರು. ಪದಾಧಿಕಾರಿಗಳಾದ ಅಶೋಕಕುಮಾರ ಜೈನ್, ಪ್ರಸಾದ ಭಂಡಾರಿ, ಮಹೇಂದ್ರ ಸಿಂಗ್, ವೆಂಕಟೇಶ ಆಚಾರ್ ಉಪಸ್ಥಿತರಿದ್ದರು.