ಬಾಕಿ ಶೈಕ್ಷಣಿಕ ಸಹಾಯಧನ ನೀಡುವಂತೆ ಕಟ್ಟಡ ಕಾರ್ಮಿಕ ಸಂಘಟನೆ ಒತ್ತಾಯ

KARMIKARU
ರಾಯಚೂರಿನ ಕಾರ್ಮಿಕ ಇಲಾಖೆಯ ಎದುರು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಕಾರ್ಮಿಕ ಸಚಿವರಿಗೆ ಬರೆ ಪತ್ರವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿಗೆ ಸಲ್ಲಿಸುತ್ತಿರುವುದು. ಅಣ್ಣಪ್ಪ, ತಿಮ್ಮಪ್ಪ ಸ್ವಾಮಿ, ಮಾರೆಪ್ಪ, ವೆಂಕಟೇಶ್, ಎನ್.ಎಸ್ ವೀರೇಶ್ ಇದ್ದರು.
Published on

ರಾಯಚೂರು: ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿ ಘೋಷಿತ ಮತ್ತು ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ನೀಡುವಂತೆ ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ನಗರದ ಕಾರ್ಮಿಕ ಇಲಾಖೆಯ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಆದೇಶಿಸಲಾಗಿದ್ದು, ಇದರಿಂದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಎರಡು ವರ್ಷಗಳಿಂದ ಶೈಕ್ಷಣಿಕ ಸಹಾಯಧನ ಬಾಕಿ ಇದ್ದು, ಕೂಡಲೇ ಸಹಾಧನ ಕಡಿತಗೊಳಿಸಿದ ಆದೇಶವನ್ನು ಹಿಂಪಡೆದು, ಬಾಕಿ ಸಹಾಯಧನವನ್ನು ನೀಡಬೇಕು.

ಕಟ್ಟಡ ಕಾರ್ಮಿಕರಿಗೆ ಹೊಸ ಕಾರ್ಡ್ ಮತ್ತು ನವೀಕರಣ ಮಾಡುವುದನ್ನು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಬೇಕು. ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಸಿಗುವ ಹಾಗೂ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಇನ್ನಿತರ ಕಿಟ್‌ಗಳನ್ನು ನಿಡಲಾಗುತ್ತಿದೆ. ಆದರೆ ಈ ಪರಿಕರಗಳು ಕಾರ್ಮಿಕರಿಗೆ ತಲುಪದೇ ನಡುವೆಯೇ ಪೋಲಾಗುತ್ತವೆ. ಬದಲಿಗೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಧನವನ್ನು ಹೆಚ್ಚಿಸಿ, ಅವರ ಕುಟುಂಬಕ್ಕೆ ವೈದ್ಯಕೀಯ ಸೇವೆಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು. ಅಣ್ಣಪ್ಪ, ತಿಮ್ಮಪ್ಪ ಸ್ವಾಮಿ, ಮಾರೆಪ್ಪ, ವೆಂಕಟೇಶ್, ಎನ್.ಎಸ್ ವೀರೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net