

ರಾಯಚೂರು: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಕಾರ್ಮಿಕ ಮಂಡಳಿಯಲ್ಲಿನ ಅವ್ಯವಹಾರವನ್ನು ಖಂಡಿಸಿ ಆ.5ರಂದು ಮುಖ್ಯಮಂತ್ರಿ ಮನೆ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಡ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಹಾಯಧನವನ್ನು ಕಡಿತ ಮಾಡುವ ಆದೇಶ ಹೊರಡಿಸಿರುವುದು ಹಾಗೂ ಇನ್ನಿತರ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈಗಾಗಲೇ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಅವ್ಯವಹಾರವನ್ನು ತಡೆಯಲು ಮತ್ತು ಕಾರ್ಮಿಕ ಬದುಕನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕಾಗಿದೆ ಎಂದರು.
ಇದನ್ನೂ ಓದಿ: ಫೆ.15ರಂದು ಪೌರಕಾರ್ಮಿಕರಿಂದ ಸಿಎಂ ಮನೆ ಚಲೋ
ಆ.5ರಂದು ಕಾರ್ಮಿಕರ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಮನೆ ಚಲೋ ಚಳುವಳಿಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಸಂಘಟನೆ ಗಳಿಗೆ ಸಂಯೋಜನೆಗೊಂಡಿರುವ ಎಲ್ಲ ಕಟ್ಟಡ ಕಾರ್ಮಿಕ ಸಂಘಗಳ ಒಕ್ಕೂಟವಾದ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ಈ ಹೋರಾಟವನ್ನು ನಡೆಸಲಾಗುವುದು. ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಪ್ಪ ಸ್ವಾಮಿ, ಆನಂದ, ಅಣ್ಣಪ್ಪ, ವೀರನಗೌಡ, ವೀರಣ್ಣ, ಭೀಮಣ್ಣ, ಶರಣಬಸವ ಸೇರಿದಂತೆ ಇತರರಿದ್ದರು.