

ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಹಪಾಹಪಿಯಿಂದ ಕಾಂಗ್ರೆಸ್ ನಾಯಕರು ಪುಕ್ಸಟ್ಟೆ ಭಾಷಣ ಮಾಡುತ್ತಿದ್ದಾರೆ. ಯಾವುದೇ ಆರ್ಥಿಕ ಲೆಕ್ಕಾಚಾರ ಇಲ್ಲದ ಕಾಂಗ್ರೆಸ್ ಗ್ಯಾರಂಟಿಗಳಿಗೆ ವಾರಂಟಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿಯುವ ಹಗಲು ಕನಸು ಕಾಣುತ್ತಿದ್ದು, ಅವರ ಆಸೆ ಈಡೇರಲ್ಲ. ರಾಜ್ಯದ ಮತದಾರರು ಪ್ರಬುದ್ಧರಿದ್ದು ಯಾವುದೇ ಉಚಿತ ಭರವಸೆಗಳಿಗೆ ಮರುಳಾಗುವುದಿಲ್ಲ. ಮತದಾರರಿಗೆ ರಾಜ್ಯ, ದೇಶದ ಹಿತ ಹಾಗೂ ಆರ್ಥಿಕ ಶಿಸ್ತು ಮುಖ್ಯ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಸೊಪ್ಪು ಹಾಕುವುದಿಲ್ಲ. ಆ ಗ್ಯಾರಂಟಿಗಳಿಗೆ ನಿರ್ದಿಷ್ಟ ಗುರಿಯಿಲ್ಲ ಹಾಗೂ ಕಾರ್ಯಸಾಧುವೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶರವೇಗ ಸಿಕ್ಕಿದ್ದು, ಕೇಂದ್ರದಿಂದ ಸಾಕಷ್ಟು ಅನುದಾನ ರಾಜ್ಯಕ್ಕೆ ಹರಿದುಬಂದಿದೆ. ಜನಪರ ಕಾರ್ಯಕ್ರಮಗಳಿಂದ ಬಿಜೆಪಿ ರಾಜ್ಯದ ಜನರ ಮನಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಆರ್ಥಿಕವಾಗಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಕಾಂಗ್ರೆಸ್ ಸ್ವಾತಂತ್ರ್ಯ ನಂತರ ಬಹುಕಾಲ ಆಡಳಿತ ನಡೆಸಿದ್ದರೂ ಜನರ ಕಲ್ಯಾಣ ಮಾಡಿರಲ್ಲ. ಕೇಂದ್ರ ಸರ್ಕಾರ ಎಂಟೂವರೆಗೆ ವರ್ಷದಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ.
ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಜನಪರವಾಗಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಯುವ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಈ ಮೂಲಕ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಬೇಕು ಎಂದು ವಿಜಯೇಂದ್ರ ತಿಳಿಸಿದರು.
ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ಬಿಜೆಪಿ ಆಡಳಿತದಿಂದ ರಾಜ್ಯದಲ್ಲಿ ನೆಮ್ಮದಿ ನೆಲೆಸಿದೆ. ಯುವಕರಿಗೆ ಉದ್ಯೋಗಳು ಸಿಗುತ್ತಿವೆ. ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ ಎಂದರು. ಶಾಸಕ ಡಾ.ಶಿವರಾಜ ಪಾಟೀಲ್, ಬಿಜೆಪಿ ಜಿಲಾಧ್ಯಕ್ಷ ರಮಾನಂದ ಯಾದವ್, ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ, ಮುಖಂಡ ತ್ರಿವಿಕ್ರಮ ಜೋಶಿ ಇತರರಿದ್ದರು.
ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಅಸಾಧ್ಯ ಎನ್ನುವ ಮಾತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಆಡಳಿತ ನೀಡುವ ಮೂಲಕ ದೇಶದ ಜನರ ವಿಶ್ವಾಸ ಗಳಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ 70 ಇದ್ದ ವಿಮಾನ ನಿಲ್ದಾಣದ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಗತಿ, ದೇಶದ ಭದ್ರತೆ ಸೇರಿ ನೂರಾರು ಯೋಜನೆ ಮೂಲಕ ಮೋದಿ ಸರ್ಕಾರ ದೇಶವನ್ನು ವಿಶ್ವಗುರು ಮಾಡುವತ್ತ ಕೊಂಡೊಯ್ಯುತ್ತಿದೆ.| ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ