

ರಾಯಚೂರು: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಿರುವ ಅಹವಾಲುಗಳ ವಿಲೇವಾರಿ ಮಾಡುವುದನ್ನು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ಮಾಡಿದ್ದು, ಕೂಡಲೇ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಗೆಜ್ಜಲಗಟ್ಟಾ ಗ್ರಾಪಂ ಸದಸ್ಯರು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶಗೆ ಸದಸ್ಯರ ನಿಯೋಗ ಸೋಮವಾರ ಮನವಿ ಸಲ್ಲಿಸಿತು. ಲಿಂಗಸುಗೂರು ತಾಲೂಕಿನ ವೀರಾಪುರದಲ್ಲಿ ಕಾರ್ಯಕ್ರಮ ನಡೆದು 4 ತಿಂಗಳಾದರೂ ಅರ್ಜಿಗಳ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಜಿಲ್ಲಾಧಿಕಾರಿ, ಲಿಂಗಸುಗೂರು ಸಹಾಯಕ ಆಯುಕ್ತರು ಕಾರ್ಯಕ್ರಮಕ್ಕೆ ಗೈರಾಗಿದ್ದರಿಂದ ಕಾರ್ಯಕ್ರಮದ ಗಂಭೀರತೆ ಹಾಳಾಗಿತ್ತು. ಹಾಜರಾಗಿದ್ದ ಅಧಿಕಾರಿಗಳು ಕಾಟಾಚಾರಕ್ಕೆ ಅಹವಾಲು ಸ್ವೀಕರಿಸಿದ್ದಾರೆ. ನಂತರ ಅರ್ಜಿಗಳ ಬಗ್ಗೆ ಗಮನ ಹರಿಸಿಲ್ಲ.
ಕಾರ್ಯಕ್ರಮದಲ್ಲಿ ಸ್ಮಶಾನ, ಗ್ರಾಮ ಠಾಣಾ ಜಾಗ ಒತ್ತುವರಿ, ಕೆರೆ ಅಭಿವೃದ್ಧಿ, ವಿದ್ಯುತ್ ಸಮಸ್ಯೆ, ಹಟ್ಟಿ ಚಿನ್ನದ ಗಣಿಯಿಂದ ಮೂಲ ಸೌಕರ್ಯ ಕಲ್ಪಿಸುವುದು ಸೇರಿ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದ್ದು, ಅದಕ್ಕೆ ಕೂಡಲೇ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಲಾಯಿತು.