

ರಾಯಚೂರು: ನಗರಸಭೆಯಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ರಾಯಚೂರು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಹಬ್ಬದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಬುಧವಾರ ಮಾತನಾಡಿ, ಅ.12ರ ವಿಜಯದಶಮಿ ದಿನದಂದು ನಗರಸಭೆ ಕಚೇರಿಯಿಂದ ನಗರದ ಮಾಣಿಕ್ ಪ್ರಭು ದೇವಸ್ಥಾನದವರೆಗೆ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳುವ ಮೂಲಕ ನಾಡಹಬ್ಬ ದಸರಾವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅತ್ಯಾಚಾರ ಖಂಡಿಸಿ ಸೆ.30ಕ್ಕೆ ಯಾದಗಿರಿ ಬಂದ್: ದುಳ್ಳಯ್ಯ
ಮೆರವಣಿಗೆಯಲ್ಲಿ 15 ವಿವಿಧ ಕಲಾತಂಡಗಳ ಮೂಲಕ ಪ್ಲಾಸ್ಟಿಕ್, ಫ್ಲೆಕ್ಸ್, ಬ್ಯಾನರ್ ನಿಷೇಧ ಸೇರಿದಂತೆ ಇನ್ನಿತರ ಪರಿಸರದ ಕುರಿತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಮೆರವಣಿಗೆಯಲ್ಲಿ ಸ್ಥಳೀಯ ಕಲಾ ತಂಡಗಳಿಗೆ, ಕಲಾವಿದರಿಗೆ ಪ್ರಾಶ್ಯಸ್ತ್ಯ ನೀಡಬೇಕು, ಯುವ ಪೀಳಿಗೆಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಭೆಗೆ ತಿಳಿಸಿದರು.
ಇದೇ ವೇಳೆ ನಗರಸಭೆ ಉಪಾಧ್ಯಕ್ಷ ಸಾಜೀದ್ ಸಮೀರ್ ಮಾತನಾಡಿ, ಈ ಬಾರಿ ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದ್ದರಿಂದ ದಸರಾ ಹಬ್ಬವನ್ನು ವೈಭವದಿಂದ ಆಚರಿಸಲಾಗುವುದು. ಎಲ್ಲ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಕಲಾವಿದ ಎಚ್.ಎಚ್ ಮ್ಯಾದಾರ್, ಸದಸ್ಯರಾದ ನರಸರೆಡ್ಡಿ, ಶ್ರೀನಿವಾಸರೆಡ್ಡಿ, ಶಶಿರಾಜ್, ನಾಗರಾಜ್, ಪ್ರಮುಖರಾದ ಹಫೀಜುಲ್ಲಾ, ವೆಂಕಟೇಶ ಬೇವಿನಬೆಂಚಿ ಸೇರಿದಂತೆ ಇತರರಿದ್ದರು.