

ರಾಯಚೂರು: ಪ್ರಯಾಣಿಕರ ಜೀವ ರಕ್ಷಣೆ ಪ್ರತಿಯೊಬ್ಬ ಚಾಲಕನ ಮೇಲಿರುತ್ತದೆ. ಅಂತಹ ಜವಾಬ್ದಾರಿಯುತವಾದ ಕೆಲಸ ಮಾಡುವ ಚಾಲಕರು ಜಿಲ್ಲಾ ಮಟ್ಟದಲ್ಲಿ ಒಕ್ಕೂಟ ರಚಿಸಿಕೊಂಡಿರುವುದು ಶ್ಲಾಘನೀಯ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಚಾಲಕರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಘಟಕದ ಉದ್ಘಾಟನೆ, ಜಿಲ್ಲಾ ಸಮಾವೇಶ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಕಳೆದ 27 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಂಘಟಿತವಾಗಿ ಚಾಲಕರ ಒಕ್ಕೂಟ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಇದೀಗ ಜಿಲ್ಲಾ ಘಟಕವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಷ್ಟದಲ್ಲಿರುವ ಚಾಲಕರಿಗೆ ನೆರವು ನೀಡಲು ಚಾಲಕರ ಒಕ್ಕೂಟ ಮುಂದಾಗಬೇಕು ಎಂದು ಹೇಳಿದರು.
ಚಾಲಕರಲ್ಲಿ ವೃತ್ತಿ ಅಭಿಮಾನ ಮಾತ್ರವಲ್ಲದೇ ಕನ್ನಡಾಭಿಮಾನವೂ ಇದೆ. ಇದೇ ರೀತಿ ಸಮಾಜದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾ ಕನ್ನಡ ಭಾಷೆ, ನಾಡು ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, ಚಾಲಕರಿಗೆ ಎದುರಾಗುವ ಸಮಸ್ಯೆಗಳಿಗೆ ಚಾಲಕರ ಒಕ್ಕೂಟ ಧ್ವನಿಯಾಗಿ ಸಮಸ್ಯೆ ಪರಿಹಾರಕ್ಕೆ ಸಹಕರಿಸುತ್ತದೆ. ಚಾಲಕರ ವೃತ್ತಿಗೆ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಚಾಲಕರು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಇ.ಶಶಿರಾಜ, ಓಂ ಸಾಯಿ ಮಂದಿರದ ಸಂಸ್ಥಾಪಕ ಅಧ್ಯಕ್ಷ ಸಾಯಿಕಿರಣ ಆದೋನಿ, ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಅಂಬಾಜಿರಾವ್, ಜಿಲ್ಲಾಧ್ಯಕ್ಷ ವೆಂಕಟೇಶ ಮಡಿವಾಳ ಸೇರಿದಂತೆ ಇತರರಿದ್ದರು.