

ರಾಯಚೂರು: ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ, ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದರೂ ಕಾಮಗಾರಿ ಆರಂಭಿಸದೆ ನಿರ್ಲಕ್ಷೃ ವಹಿಸಲಾಗಿದೆ. ಹಲವಾರು ಕಟ್ಟಡಗಳು ವರ್ಷಗಳಿಂದ ಪ್ರಗತಿ ಹಂತದಲ್ಲಿಯೇ ಇದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಕುಮಾರ ಬಂಗಾರಪ್ಪ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಬಾಲಕಿಯರ ವಸತಿ ನಿಲಯದಲ್ಲಿನ ಸಿಸಿ ಕ್ಯಾಮರಾಗಳನ್ನು ಉದ್ದೇಶ ಪೂರ್ವಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ದೂರು ಬಂದಿದೆ. ಸಿಸಿ ಕ್ಯಾಮರಾ ಕಾರ್ಯ ನಿರ್ವಹಣೆ ಕುರಿತು ಕಳೆದ ಏಳು ದಿನಗಳ ಮಾಹಿತಿಯೊಂದಿಗೆ ಸಮಿತಿಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ವಸತಿ ನಿಲಯ ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾೃಪ್ ಗ್ರೂಪ್ ರಚಿಸಿ ಅದರಲ್ಲಿ ನಿತ್ಯ ಊಟ ಹಾಗು ಸ್ವಚ್ಛತೆ ಕುರಿತು ಮಾಹಿತಿ ಹಾಕಬೇಕು. ಜೇಗರಕಲ್, ಚಂದ್ರಬಂಡಾ ವಸತಿ ನಿಲಯಗಳಲ್ಲಿ ಮಕ್ಕಳಿಂದ ಊಟ ಬಡಿಸಲಾಗುತ್ತಿದ್ದು ಮೇಲ್ವಿಚಾರಕರನ್ನು ಕೂಡಲೇ ಅಮಾನತುಗೊಳಿಸಬೇಕು.
ವಸತಿ ನಿಲಯಗಳ ನಿರ್ವಹಣೆ ವೆಚ್ಚಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಕೆಕೆಆರ್‌ಡಿಬಿ, ನಂಜುಂಡಪ್ಪ ಸಮಿತಿ ವರದಿ ಆಧಾರದ ಮೇಲೆ ಅನುದಾನ ಬಳಕೆಗೆ ಅವಕಾಶಗಳಿದ್ದು, ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗಬೇಕು. ವಸತಿ ನಿಲಯಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಬೇಕು ಎಂದು ಕುಮಾರ ಬಂಗಾರಪ್ಪ ಸೂಚನೆ ನೀಡಿದರು.