

ರಾಯಚೂರು: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6ನೇ ಸುತ್ತಿನ ಕಾಲುಬಾಯಿ ರೋಗದ ಉಚಿತ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಡಿಸಿ ಕೆ.ನಿತೀಶ್ ಕರೆ ನೀಡಿದರು.
ನಗರದ ಡಿಸಿ ಕಚೇರಿಯಲ್ಲಿ ಪಶುಪಾಲನಾ, ಪಶುವೈದ್ಯ ಸೇವಾ ಇಲಾಖೆಯ ಉಚಿತ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಗುರುವಾರ ಮಾತನಾಡಿ, ಅ.21ರಿಂದ ನ.20ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗದ ನಿಯಂತ್ರಣಕ್ಕೆ ಉಚಿತ ಲಸಿಕೆ ನೀಡಲಾಗುತ್ತಿದೆ. ಜಾನುವಾರುಗಳ ಮಾಲೀಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಿಬ್ಬಂದಿ ತಮ್ಮ ಹಳ್ಳಿಗೆ ಲಸಿಕೆ ಹಾಕಲು ಬಂದಾಗ ಎಲ್ಲ ರೈತರು ಹಾಗೂ ಜಾನುವಾರು ಮಾಲೀಕರು 3ತಿಂಗಳ ಮೇಲ್ಪಟ್ಟ ಕರುಗಳಿಗೆ ಹಾಗೂ ಇತರೆ ಪಶುಗಳಿಗೆ ಲಸಿಕೆ ಹಾಕಿಸುವ ಮೂಲಕ ಸಾಂಕ್ರಾಮಿಕ ರೋಗದಿಂದಾಗುವ ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೆಶಕರಾದ ಅಶೋಕ ಕೋಲ್ಕಾರ್ ಇದ್ದರು.