

ರಾಯಚೂರು: ಮಾದಾರ ಚನ್ನಯ್ಯ ಜಯಂತಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೇ ಇಡೀ ಜಿಲ್ಲೆಗೆ ಅತ್ಯಂತ ಮುಖ್ಯವಾದ ಜಯಂತಿಯಾಗಿದ್ದು, ಎಲ್ಲ ಸಮಾಜಗಳು ಸೇರಿಕೊಂಡು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಮಹಿಳಾ ಸಮಾಜದಲ್ಲಿ ಮಹಾಶರಣ ಮಾದಾರ ಚನ್ನಯ್ಯ ಜಯಂತ್ಯೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಮಾದಾರ ಚನ್ನಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.
ರಾಯಚೂರು ಜಿಲ್ಲೆ ಸರ್ವಜನಾಂಗದ ತೋಟವಾಗಿದ್ದು, ಇಲ್ಲಿ ಜಾತಿ, ಧರ್ಮ, ಮೇಲು, ಕೀಳು ಎಂಬ ಭಾವನೆ ಇಲ್ಲ, ಎಲ್ಲರೂ ಸಮಾನವಾಗಿ ಬದುಕುತ್ತಿದ್ದೇವೆ. ಇಂತಹ ಪ್ರದೇಶದಲ್ಲಿ ಎಲ್ಲ ಸಮಾಜದ ನಾಯಕರು ಸೇರಿಕೊಂಡು ಮಾದಾರ ಚನ್ನಯ್ಯ ಜಯಂತಿಯನ್ನು ಆಚರಣೆ ಮಾಡುವ ಮೂಲಕ ರಾಜ್ಯಕ್ಕೆ ಎಲ್ಲರೂ ಒಂದು ಎನ್ನುವ ಸಂದೇಶವನ್ನು ಸಾರಿದ್ದಾರೆ ಎಂದರು.
ಇದೇ ವೇಳೆ ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನದ ಷಡಾಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಯೊಂದು ಸಮುದಾಯದ ಪ್ರಮುಖರು ಸೇರಿರುವುದು ಬಸವಣ್ಣನವರ ಅನುಭವ ಮಂಟಪವನ್ನು ನೆನಪಿಸುತ್ತದೆ. ಸಮುದಾಯದಲ್ಲಿ ಜಾಗೃತಿ ಮೂಡಿಸುವುದರಿಂದ ಸಮಾಜ ಮುಂದೆ ಬರುವುದಿಲ್ಲ. ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಹೇಳಿದರು.
ಸದನದಲ್ಲಿ ಪರಿಶಿಷ್ಟ ಜಾತಿಯ ವಿರುದ್ಧ ಅದೇ ಸಮುದಾದಿಂದ ಆಯ್ಕೆಯಾದ ಮಂತ್ರಿಗಳು ಮಾತನಾಡುತ್ತಿರುವುದು ಸಮಾಜದ ನಂಬಿಕೆ ದ್ರೋಹ ಬಗೆದಂತಿದೆ. ಸಮಾಜದ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೇ ಕೂಡಲೇ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎ.ವಸಂತಕುಮಾರ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ನಗರಸಭೆ ಸದಸ್ಯ ಜಯಣ್ಣ, ಹಿರಿಯ ಸಾಹಿತಿ ವೀರಹನುಮಾನ, ಪ್ರಮುಖರಾದ ಎಂ.ವಿರುಪಾಕ್ಷಿ, ರವೀಂದ್ರ ಜಲ್ದಾರ, ಬಿ.ನರಸಪ್ಪ ದಂಡೋರ, ಬಾಲಸ್ವಾಮಿ ಕೊಡ್ಲಿ, ಎಂ.ಪವನಕುಮಾರ, ನರಸಿಂಹಲು ಮಾಡಗಿರಿ ಸೇರಿದಂತೆ ಇತರರಿದ್ದರು.