ಜಾತಿ ಪ್ರಮಾಣ ಪತ್ರ ವಿತರಣೆ ವೇಳೆ ಸಲ್ಲಿಸುವ ಆಕ್ಷೆಪಣೆಗಳಿಂದ ಜಾತಿ ಸಂಘರ್ಷ: ಯಮುನಪ್ಪ

Yamunappa
ಯಮುನಪ್ಪ
Published on

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಭೋವಿ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ತಹಶೀಲ್ದಾರ್ ಕಚೇರಿಗೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ಕೂಡಲೇ ತಕರಾರರು ಮಾಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕೆಂದು ಕರ್ನಾಟಕ ಭೊವಿ ಸಮಾಜ ವಿಕಾಸ ಸಂಘದ ಪ್ರಧಾನ ಕಾರ್ಯದರ್ಶಿ ಯಮುನಪ್ಪ ಭೋವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಭೋವಿ ಸಮಾಜವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು, ಈ ಕುರಿತು 1950ರಲ್ಲಿ ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಭೋವಿ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಿದ್ದರೂ. ಮಸ್ಕಿಯಲ್ಲಿ ಪ್ರಮಾಣ ಪತ್ರ ನೀಡದಂತೆ ಆಕ್ಷೇಪಣೆ ಸಲ್ಲಿಸಲಾಗುತ್ತಿದ್ದು, ಇದರಿಂದ ಜಾತಿ ಸಂಘರ್ಷ ಉಂಟಾಗುವ ಸಾಧ್ಯತೆಗಳಿವೆ ಎಂದರು.

ಭೋವಿ ಸಮಾಜವು ಮೇಣೆ(ಪಲ್ಲಕ್ಕಿ) ಹೊರುವ ಕಾಯಕವನ್ನು ಮಾಡಿಕೊಂಡು ಬಂದವರು, ಮೈಸೂರು ರಾಜರು ಭೋವಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದರು. 1977ರಲ್ಲಿ 101 ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. 2002ರಲ್ಲಿ ವಡ್ಡರ ಎಂಬ ಪರ್ಯಾಯ ಪದಗಳನ್ನು ಎಸ್‌ಸಿ ಪಟ್ಟಿಗೆ ಸೇರಿಸಲಾಗಿದೆ. ಇದೀಗ ಮಸ್ಕಿ ತಾಲೂಕಿನ ಮೆದಕಿನಾಳ, ಬೆನಕನಾಳ, ಗೌಡನಬಾವಿ ಸೇರಿದಂತೆ ಹಲವು ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಕೆಲವರು ತಕರಾರು ಮಾಡುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟೇಶ್ ಚಿಕಲದ್, ನಾಗರಾಜ್ ಭೋವಿ, ರಮೇಶ್ ಭೋವಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net