ಪ್ರಕರಣ ಸಿಬಿಐಗೆ ಒಪ್ಪಿಸಲು ಮೃತ ಪ್ರಕಾಶ ಬಾಬು ಪತ್ನಿ, ದಲಿತ ಸಂಘಟನೆಗಳಿಂದ ಪ್ರತಿಭಟನೆ

Raichur FDA Death Dalita Protest
ರಾಯಚೂರಿನ ಡಿಸಿ ಕಚೇರಿ ಮುಂದೆ ದಲಿತ ಸಂಘಟನೆಗಳ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.
Published on

ರಾಯಚೂರು: ಸಹಾಯಕ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶ ಬಾಬು ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರ ಕುಟುಂಬದ ಸದಸ್ಯರು ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿಗೆ ಆಗಮಿಸಿ ಎಡಿಸಿ ಕೆ.ಆರ್.ದುರಗೇಶಗೆ ಮನವಿ ಸಲ್ಲಿಸಲಾಯಿತು.

ಪ್ರಕಾಶ ಬಾಬು ಆತ್ಮಹತ್ಯೆ ಮಾಡಿಕೊಂಡಿಲ್ಲ. ಮೇಲಧಿಕಾರಿಗಳ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು. ಕರ್ತವ್ಯದಲ್ಲಿದ್ದಾಗ ಪ್ರಕಾಶ ಬಾಬು ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡದ ಸಹಾಯಕ ಆಯುಕ್ತ ಸಂತೋಷ ಕಾಮಗೌಡರು, ಈಗ 40 ಲಕ್ಷ ರೂ. ದುರ್ಬಳಕೆ ಆಗಿದೆ ಎಂದು ದೂರು ನೀಡಿರುವುದು ವ್ಯವಸ್ಥಿತ ಹುನ್ನಾರ. 2005ರಿಂದ ಭೂಸ್ವಾಧೀನ ವಿಭಾಗದಲ್ಲಿ ಪ್ರಕಾಶ್ ಬಾಬು ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಹಲವು ಎಸಿಗಳು ಬದಲಾಗಿದ್ದಾರೆ. ಹಣಕಾಸು ವ್ಯವಹಾರದ ಸಂಪೂರ್ಣ ಹೊಣೆಗಾರಿಕೆ ಸಹಾಯಕ ಆಯುಕ್ತರದು. ಅವರ ಗಮನಕ್ಕೆ ಬಾರದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಎಸಗಲು ಹೇಗೆ ಸಾಧ್ಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಮೇಲಧಿಕಾರಿಗಳ ಪರಸ್ಪರ ಹೊಂದಾಣಿಕೆಯಿಲ್ಲದೆ ಭ್ರಷ್ಟಾಚಾರವಾಗಲು ಸಾಧ್ಯವಿಲ್ಲ. ಈ ಎಲ್ಲ ಸತ್ಯಾಸತ್ಯತೆಗಳನ್ನು ಮರೆಮಾಚಿ, ಕೇವಲ ಪ್ರಕಾಶ ಬಾಬು ತಲೆಗೆ ಆರೋಪಗಳನ್ನು ಹೊರಿಸಲಾಗುತ್ತಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಸಹಾಯಕ ಆಯುಕ್ತರನ್ನು ಪ್ರಮುಖ ಆರೋಪಿಯನ್ನಾಗಿಸಿ, ಅಮಾನತು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಪ್ರಕಾಶ ಬಾಬು ಪತ್ನಿ ಅಂಬಿಕಾ, ಒಕ್ಕೂಟದ ಪದಾಧಿಕಾರಿಗಳಾದ ಎಂ.ವಿರೂುಪಾಕ್ಷಿ, ಜೆ.ಬಿ.ರಾಜು, ಅಂಬಣ್ಣ ಅರೋಲಿ, ರವೀಂದ್ರ ಜಲ್ದಾರ್, ಪಿ.ಯಲ್ಲಪ್ಪ, ಜೆ.ಸತ್ಯನಾಥ, ಹೇಮರಾಜ ಅಸ್ಕಿಹಾಳ, ರಾಘವೇಂದ್ರ ಬೋರೆಡ್ಡಿ, ಎಸ್.ರಾಜು, ನರಸಿಂಹಲು, ಬಸವರಾಜ, ಎಂ.ಸುಭಾಷ, ರವಿ ಶಿರಡ್ಡಿ, ರಾಜು ಬೋವಿನಾಳ ಹಾಗೂ ಇತರರಿದ್ದರು.

ಕಚೇರಿಯ ಒತ್ತಡದಿಂದಾಗಿ ನನ್ನ ಪತಿ ಸರಿಯಾಗಿ ಊಟ ಮಾಡದಂತಾಗಿದ್ದರು. ಬ್ಯಾಂಕ್‌ನಲ್ಲಿ ಖಾತೆ ಆಗಿರುವುದು ನನಗೆ ಗೊತ್ತಿಲ್ಲ. ನನ್ನ ಸಹಿ ಕೂಡಾ ಹೊಂದಾಣಿಕೆಯಾಗಿಲ್ಲ. ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಿದರೆ ನಿಜಾಂಶ ಹೊರಬರಲಿದೆ.| ಅಂಬಿಕಾ, ಮೃತ ಪ್ರಕಾಶ ಬಾಬು ಪತ್ನಿ, ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net