

ರಾಯಚೂರು: ದೇವದುರ್ಗ ಮತ್ತು ರಾಯಚೂರು ನಗರ ಕ್ಷೇತ್ರದಲ್ಲಿ 6 ಸಾವಿರ ಕೋಟಿ ರೂ. ಕಾಮಗಾರಿ ಹೆಸರಿನಲ್ಲಿ ಲೂಟಿ ನಡೆಸಲು ಕೇಂದ್ರ ಸಚಿವ ಅಮಿತ್ ಷಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್‌ನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ 3,100 ಕೋಟಿ ರೂ. ಕಾಮಗಾರಿ, ರಾಯಚೂರು ನಗರ ಕ್ಷೇತ್ರದಲ್ಲಿ 2,500 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುವುದಕ್ಕೆ ಬಿಜೆಪಿ ನಾಯಕರು ಬರುತ್ತಿದ್ದಾರೆ. ದೇವದುರ್ಗ ತಾಲೂಕು ಬಿಹಾರದಂತೆ ಮಾಡಿದ ಕೀರ್ತಿ ಶಾಸಕ ಕೆ.ಶಿವನಗೌಡಗೆ ಸಲ್ಲುತ್ತದೆ. ಮಟ್ಕಾ, ಜೂಜು, ಮದ್ಯ, ಮರಳು ಮಾಫಿಯಾ ಶಾಸಕ ಶಿವನಗೌಡರ ಸಾಧನೆಯಾಗಿದೆ. ಯಾವುದೇ ಕೆಲಸ ಮಾಡದೆ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ದೂರಿದರು.\
ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಕಾಮಗಾರಿ ಕಳಪೆ ಮಾಡಿ ಅನುದಾನ ಲೂಟಿ ಮಾಡಿದ್ದಾರೆ. ಕೆಲವು ಕಾಮಗಾರಿಗಳನ್ನು ಮಾಡದೆ ಬಿಲ್ ಎತ್ತುವಳಿ ಮಾಡಿದ್ದಾರೆ. ಭ್ರಷ್ಟ ಶಾಸಕರ ಮೇಲೆ ಐಟಿ, ಇಡಿ ದಾಳಿ ನಡೆಸಬೇಕು. ದೇವದುರ್ಗ, ರಾಯಚೂರು ಕ್ಷೇತ್ರದ ಶಾಸಕರು ಸೋಲುವ ಭಯದಿಂದ ದಿಢೀರನೇ 6 ಸಾವಿರ ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ಮಾಡಿಸಿ ಮತದಾರರ ಕಿವಿಗೆ ಹೂ ಇಡಲು ಬರುತ್ತಿದ್ದಾರೆ. ಇದನ್ನು ಮತದಾರರು ಪ್ರಶ್ನಿಸಬೇಕು ಎಂದು ವಿರೂಪಾಕ್ಷಿ ಹೇಳಿದರು.