

ರಾಯಚೂರು: ಕನ್ನಡಿಗರೆಂದರೇ ಕೇವಲ ಕರ್ನಾಟಕ ರಾಜ್ಯದಲ್ಲಿರುವವರಲ್ಲ. ಇತರೆ ರಾಜ್ಯ, ದೇಶದಲ್ಲಿ ಕನ್ನಡ ಆಭ್ಯಾಸ ಮಾಡುತ್ತಿರುವವರು ಕನ್ನಡ ವಲಯದಲ್ಲಿ ಕೆಲಸ ಮಾಡುತ್ತಿರುವವರೂ ಕನ್ನಡಿಗರೇ. ರಾಜ್ಯದ ಗಡಿಯಾಚೆಗಿರುವ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳು, ಅಲ್ಲಿ ಜೀವನ ನಡೆಸುತ್ತಿರುವ ಕನ್ನಡಿಗರೂ ಕೂಡ ಕನ್ನಡಾಂಬೆಯ ಕಂದಮ್ಮಗಳೇ ಇದೀಗ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸ್ಥಿತಿ ಶೋಚನೀಯವಾಗಿದ್ದು, ಮುಂದೆ ಅಭ್ಯಾಸ ಮಾಡಲು ಅವಕಾಶವಿಲ್ಲದಂತಾಗಿದೆ.
ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿಭಾಗದಲ್ಲಿದ್ದು, ಹಲವು ವರ್ಷಗಳ ಹಿಂದೆ ರಾಯಚೂರು ತೆಲಂಗಾಣ ಗಡಿಯಲ್ಲಿರುವ ಮಕ್ತಾಲ್ ತಾಲೂಕಿನ 33 ಗ್ರಾಮಗಳಲ್ಲಿ 22 ಕನ್ನಡ ಶಾಲೆಗಳಿದ್ದವು. ಅದರಲ್ಲಿ ಪ್ರಸ್ತುತ 13 ತಾಕಲೂಕುಗಳಲ್ಲಿ 12 ಶಾಲೆಗಳು ಮಾತ್ರ ಉಳಿದಿದ್ದು, ಇತ್ತೀಚೆಗೆ ಆಲಂಪಲ್ಲಿ ಎಂಬ ಗ್ರಾಮದಲ್ಲಿದ್ದ ಕನ್ನಡ ಶಾಲೆ ಮುಚ್ಚಿ ಹೋಗಿದೆ.
1ರಿಂದ ಹತ್ತನೆ ತರಗತಿವರೆಗೆ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಓದಿದ ನಂತರ ಕರ್ನಾಟಕ ರಾಜ್ಯದಲ್ಲಿ ಮುಂದಿನ ವ್ಯಾಸಂಗ ಮಾಡಲು ಕನ್ನಡಿಗರಿಗೆ ಸೀಟುಗಳು ಸಿಗುತ್ತಿಲ್ಲ. ಮುಖ್ಯವಾಗಿ ವೃತ್ತಿಪರ ಕೋಸ್‌ಗಳಾದ ಐಟಿಐ, ಡಿಪ್ಲೊಮಾ ಕೋರ್ಸ್‌ಗಳಿಗೆ ಸೀಟು ಸಿಗದೇ ಗಡಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಹೊಟೆಲ್, ಖಾಸಗಿ ವಲಯಗಳು ಮತ್ತು ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾದರೆ ಕರ್ನಾಟಕ ರಾಜ್ಯದಲ್ಲಿ 7 ವರ್ಷ ವಿದ್ಯಾಭ್ಯಾಸ ಮಾಡಿರಬೇಕೆಂಬ ನಿಯಮವಿದ್ದು, ಆದರೆ ಗಡಿಭಾಗದಲ್ಲಿ 10 ವರ್ಷ ಪೂರೈಸಿದ ವಿದ್ಯಾರ್ಥಿಗಳಿಗೆ ಮತ್ತೆ ಕರ್ನಾಟಕದಲ್ಲಿ ಏಳು ವರ್ಷ ಹೇಗೆ ವಿದ್ಯಾಭ್ಯಾಸ ಮಾಡಬೇಕೆನ್ನುವ ಗೊಂದಲ ಕಾಡುತ್ತಿದೆ.
ಐಟಿಐ, ಡಿಪ್ಲೊಮಾ ಕೋರ್ಸ್ ಹೊರತುಪಡಿಸಿ ಆರ್ಟ್ಸ್, ಕಾಮರ್ಸ್ ಸೇರಿದಂತೆ ಇತರೆ ಕೋರ್ಸ್‌ಗಳನ್ನು ಮಾಡಲು ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳಬೇಕಾದರೇ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಇತರೆ ರಾಜ್ಯದ ತಹಸೀಲ್ದಾರ್ ನೀಡುವ ಪ್ರಮಾಣ ಪತ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಪರಿಗಣಿಸದೇ ಇರುವುದರಿಂದ ಹಾಸ್ಟೆಲ್ ವ್ಯವಸ್ಥೆಗಳೂ ವಿದ್ಯಾರ್ಥಿಗಳ ಕೈತಪ್ಪಿ ಹೋಗುತ್ತಿವೆ.
ತೆಲಂಗಾಣ ರಾಜ್ಯದ ಮೈಬೂಬ್‌ನಗರ, ಹೈದ್ರಾಬಾದ್, ಅನಂತಪುರ ಹಾಗೂ ಕರ್ನೂಲ್ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶ ರಾಜ್ಯದ ಹಲವು ಜಿಲ್ಲೆಗಳಲ್ಲಿ 24 ಸಾವಿರಕ್ಕೂ ಹೆಚ್ಚಿನ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದುತ್ತಿದ್ದು, ಮಕ್ಕಳಿಗೆ ಮುಂದಿನ ಅಬ್ಯಾಸಕ್ಕಾಗಿ ಕೋರ್ಸ್ ಸಿಗದ ಕಾರಣ ಮಕ್ಕಳ ಭವಿಷ್ಯದ ಕುರಿತು ಪೋಷಕರು ಆತಂಕದಲ್ಲಿದ್ದಾರೆ.
ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲ್, ಬರಗೂರ ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು ಗಡಿ ಭಾಗದ ಶಾಲೆಗಳಲ್ಲಿ ಅಭ್ಯಾಸ ಮಾಡುವ ಕನ್ನಡ ಮಕ್ಕಳ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸರ್ಕಾರ ನೀಡಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಕನ್ನಡ ಭಾಷೆಗಳಿಗೆ ಮಾತ್ರ ಸೀಮಿತವಾದ ಹೋರಾಟಗಳು ಹಾಗೂ ಹೋರಾಟಗಾರರು, ಗಡಿಭಾಗದ ಶಾಲೆಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾಗಿರುವುದು ಅತ್ಯವಶ್ಯಕವಾಗಿದೆ. ತೆಲಂಗಾಣ ರಾಜ್ಯ ಸರ್ಕಾರವು ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಕಟ್ಟಡ, ಮಕ್ಕಳ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಆದರೆ ಕನ್ನಡ ಭಾಷೆ ಕಲಿತ ಮಕ್ಕಳಿಗೆ ಉದ್ಯೋಗ ನೀಡಲು ಮಾತ್ರ ಮುಂದಾಗುತ್ತಿಲ್ಲ. ಇತ್ತ ಕರ್ನಾಟಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಮತ್ತು ಉದ್ಯೋಗ ಪಡೆಯಲು ಕೂಡ ಸದಂಕಷ್ಟ ಎದುರಾಗಿದೆ.
ಕೂಡಲೇ ಗಡಿಭಾಗದ ಶಾಲೆಗಳ ಮಕ್ಕಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗ ನೀಡಲು ತೆಲಂಗಾಣ ಮತ್ತು ಕರ್ನಾಟಕ ಸರ್ಕಾರ ಮುಂದಾದಲ್ಲಿ ಗಡಿನಾಡ ಮಕ್ಕಳ ಬದುಕು ಹಸನಾಗಬಹುದಾಗಿದೆ.
ಪ್ಯಾಂತ್ಯಗಳ ಪಟ್ಟಿ ಸೇರ್ಪಡೆಗೆ ಕೂಗು: ಕೆಲವು ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಗಡಿನಾಡು ಪ್ರಾಂತ್ಯ ಎಂಬ ಆಯ್ಕೆ ಸಿಗುತ್ತದೆ ಆದರೆ ಇದರಲ್ಲಿ ಆಯ್ದ ಕೆಲವು ಗಡಿನಾಡ ಪ್ರಾಂತ್ಯಗಳು ಮಾತ್ರ ಸೇರ್ಪಡೆಯಾಗಿದ್ದು, ರಾಯಚೂರು ಜಿಲ್ಲೆಯನ್ನು ಗಡಿನಾಡು ಪ್ರಾಂತ್ಯದ ಪಟ್ಟಿಗೆ ಸೇರಿಸಿದ್ದಲ್ಲಿ, ಕನ್ನಡಿಗರಿಗೆ ಅನುಕೂಲವಾಗಲಿದೆ ಎಂಬುದು ಕನ್ನಡಪರ ಹೋರಾಟಗಾರರ ಅಭಿಪ್ರಾಯವಾಗಿದೆ.
ಗಡಿಭಾಗದ ಕನ್ನಡ ಶಾಲೆಗಳಿಗೆ ಆಯಾ ರಾಜ್ಯಗಳ ಸರ್ಕಾರಗಳು ಸೌಲಭ್ಯ ಒದಗಿಸುತ್ತಿವೆ. ಆದರೆ ಉದ್ಯೋಗ ಮತ್ತು ಹೆಚ್ಚುವರಿ ವ್ಯಾಸಂಗಕ್ಕಾಗಿ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. - ಅಮರದೀಕ್ಷಿತ್, ಉಪಾಧ್ಯಕ್ಷ, ಗಡಿನಾಡು ಕನ್ನಡ ಸಂಘ, ಕೃಷ್ಣಾ ಮಂಡಲ, ತೆಲಂಗಾಣ