

ರಾಯಚೂರು, ರಕ್ತದಾನ, ಮಹತ್ವ, ಅರಿಯಿರಿ, Raichur, Blood Donation, Importance, Know,
ರಾಯಚೂರು: ರಕ್ತದಾನದಿಂದ ಆಗುವ ಪ್ರಯೋಜನ ಮತ್ತು ಮಹತ್ವ ವನ್ನು ಯುವಜನಾಂಗ ಅರಿತುಕೊಳ್ಳಬೇಕಾಗಿದೆ. ರಕ್ತದಾನದಿಂದ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದಾಗಿದೆ ಎಂದು ಆಶೀರ್ವಾದ ಫೌಂಡೇಷನ್ ಅಧ್ಯಕ್ಷ ಡಾ.ಬಸನಗೌಡ ಪಾಟೀಲ್ ಹೇಳಿದರು.
ಸ್ಥಳೀಯ ಓಂ ಸಾಯಿ ಧ್ಯಾನ ಮಂದಿರದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಪ್ರತಿಯೊಬ್ಬರೂ ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ಅದರಿಂದ ಹಲವು ಜನರ ಪ್ರಾಣ ರಕ್ಷಣೆ ಮಾಡಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯ ಬಹಳಷ್ಟಿದೆ. ಒಂದು ಯೂನಿಟ್ ರಕ್ತದಿಂದ ಮೂವರ ಪ್ರಾಣ ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕಾಗಿದೆ. ಸಂಘ ಸಂಸ್ಥೆಗಳು ಶಿಬಿರಗಳನ್ನು ಏರ್ಪಡಿಸುವ ಮೂಲಕ ರಕ್ತದ ಕೊರತೆಯನ್ನು ನಿಗಿಸಲು ಮುಂದಾಗಬೇಕು ಎಂದು ಹೇಳಿದರು.
75ನೇ ಬಾರಿಗೆ ರಕ್ತದಾನ ಮಾಡಿದ ಅಯ್ಯಪ್ಪ ಸ್ವಾಮಿ ಪಿಕಳಿಹಾಳ ಮತ್ತು ಇತರರನ್ನು ಸನ್ಮಾನಿಸಲಾಯಿತು. ಶಿರಡಿ ಸಾಯಿಬಾಬಾ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಾಯಿ ಕಿರಣ್ ಆದೋನಿ, ನಗರಸಭೆ ಮಾಜಿ ಸದಸ್ಯರಾದ ಎನ್.ಶಂಕ್ರಣ್ಣ, ಜಿ.ಶಿವಮೂರ್ತಿ, ರಿಮ್ಸ್ ಆಸ್ಪತ್ರೆಯ ಡಾ.ಟಿ.ಆರ್.ಜಯಂತ್, ಕಾವ್ಯಾ ಪಟ್ಟಣಶೆಟ್ಟಿ, ಕಿರಣ ಗಂಜಿ ಉಪಸ್ಥಿತರಿದ್ದರು.