ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ರಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್

2505 Raichur DC Visit Black Fungus
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿನ ಬ್ಲ್ಯಾಕ್ ಫಂಗಸ್ ವಾರ್ಡ್‌ಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಂಗಳವಾರ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.
Published on

ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆ ಪತ್ಯೇಕ ಎರಡು ವಾರ್ಡ್‌ಗಳನ್ನು ಮಾಡಲಾಗಿದ್ದು, ತಲಾ 14 ಹಾಸಿಗೆಯಂತೆ 18 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.

ಸ್ಥಳೀಯ ರಿಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ವಾರ್ಡ್‌ಗೆ ಮಂಗಳವಾರ ಭೇಟಿ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಸೌಲಭ್ಯಗಳನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ 7 ಜನರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಇಬ್ಬರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಹಂತ ಹಂತವಾಗಿ ಉಳಿದವರಿಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಶಸ್ತ್ರ ಚಿಕಿತ್ಸೆ ನಡೆಸಿದಲ್ಲಿ ಫಂಗಸ್ ಹರಡುವುದನ್ನು ತಡೆಗಟ್ಟಬಹುದು. ಚಿಕಿತ್ಸೆಗೆ ಅಗತ್ಯವಿರುವ ಆ್ಯಂಪೋಟಿರಿಸಿನ್ ಚುಚ್ಚುಮದ್ದುಗಳ 350 ಡೋಸ್ ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಂದು ಸಂಜೆಯೊಳಗೆ 40 ರಿಂದ 50 ಚುಚ್ಚುಮದ್ದು ಜಿಲ್ಲೆಗೆ ಆಗಮಿಸಲಿದೆ ಎಂದರು.

ಐಎಂಎ ಸದಸ್ಯರ ಸಭೆ ಕರೆದು ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡು ಬಂದಲ್ಲಿ ಸೋಂಕಿತರನ್ನು ತಕ್ಷಣ ರಿಮ್ಸ್ ಆಸ್ಪತ್ರೆಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ನೀಡದಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್, ರೆಮ್‌ಡೆಸಿವಿರ್ ಕೊರತೆಯಿಲ್ಲ. ಪ್ರಸ್ತುತ ಒಪೆಕ್ ಮತ್ತು ರಿಮ್ಸ್‌ನ ಕೋವಿಡ್ ವಾರ್ಡ್‌ಗಳಲ್ಲಿ ಶೇ.50ರಷ್ಟು ಹಾಸಿಗೆಗಳು ಖಾಲಿಯಿವೆ. ಹೊಸದಾಗಿ 50 ವೆಂಟಿಲೇಟರ್ ಬಂದಿದ್ದು, ಅವುಗಳನ್ನು ವಾರದೊಳಗೆ ಸಿದ್ಧಪಡಿಸಲಾಗುವುದು. ರಿಮ್ಸ್‌ನಲ್ಲಿ ಒಟ್ಟು 200 ಹಾಸಿಗೆಗಳ ಮಕ್ಕಳ ವಾರ್ಡ್ ಆರಂಭಿಸಲು ಯೋಜನೆ ರೂಪಿಸಿದ್ದು, 50 ಐಸಿಯು ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದಕ್ಕೆ ಮಕ್ಕಳ ತಜ್ಞರು ಹಾಗೂ ಸಿಬ್ಬಂದಿಯ ಅವಶ್ಯಕತೆಯಿದೆ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ವೈದ್ಯಕೀಯ ಅಧೀಕ್ಷ ಭಾಸ್ಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ವಿಜಯಶಂಕರ ಇತರರು ಇದ್ದರು.

ಹಳ್ಳಿಗಳಲ್ಲಿ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಮನೆ ಮನೆ ಸರ್ವೇ ನಡೆಸಿ ಸೋಂಕಿತರನ್ನು ಕ್ವಾರಂಟೈನ್ ಕೇರ್‌ಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರ ಸಹಕಾರದೊಂದಿಗೆ ಹಳ್ಳಿಗಳಲ್ಲಿ ಸೋಂಕಿತರನ್ನು ಕ್ವಾರಂಟೈನ್ ಕೇರ್‌ಗೆ ಕಳುಹಿಸಲಾಗುತ್ತಿದೆ. 10ಕ್ಕಿಂತ ಹೆಚ್ಚು ಕೇಸ್ ಬಂದ ಹಳ್ಳಿಗಳಲ್ಲಿ ಕಂಟೇನ್ಮೆಂಟ್ ಜೋನ್ ಮಾಡಲಾಗುತ್ತಿದೆ.| ಆರ್.ವೆಂಕಟೇಶ ಕುಮಾರ, ರಾಯಚೂರು ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net