

ರಾಯಚೂರು: ಜೇನು ಸಾಕಣೆ ಗ್ರಾಮೀಣ ಆಧಾರಿತ ಉದ್ದಿಮೆಯಾಗಿದ್ದು, ರೈತರು ಕೃಷಿಯ ಜತೆಗೆ ಹೆಚ್ಚುವರಿ ಆದಾಯ ತಂದುಕೊಡುವ ಉಪಕಸುಬನ್ನಾಗಿ ಮಾಡಿಕೊಳ್ಳಬಹುದಾಗಿದೆ ಎಂದು ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ ಸಲಹೆ ನೀಡಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗಾಗಿ ಗುರುವಾರ ಏರ್ಪಡಿಸಿದ್ದ ವೈಜ್ಞಾನಿಕ ಜೇನು ಸಾಕಣೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜೇನು ಕೃಷಿಯನ್ನು ಭೂರಹಿತ ಕೃಷಿ ಕಾರ್ಮಿಕರು ಕೂಡ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಜೇನು ಕೃಷಿ ಕಡಿಮೆಯಾಗುತ್ತಿದೆ. ಆದರೆ, ಜೇನಿಗೆ ಹೆಚ್ಚಿನ ಬೇಡಿಕೆಯಿದೆ. ಗ್ರಾಮೀಣ ನಿರುದ್ಯೋಗಿ ಯುವಕರು, ಸಣ್ಣ ಹಿಡುವಳಿದಾರರು ಜೇನು ಕೃಷಿಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸಬಲರಾಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಎನ್.ಶ್ರೀವಾಣಿ ಮಾತನಾಡಿ, ಜೇನು ಹುಳುಗಳಿಂದ ಹಣ್ಣಿನ ಬೆಳೆಗಳಲ್ಲಿ ಶೇ.25ರಿಂದ 60ರಷ್ಟು, ಸಾಂಬಾರು ಬೆಳೆಗಳಲ್ಲಿ ಶೇ.50ರಿಂದ 95ರಷ್ಟು, ತರಕಾರಿ ಬೆಳೆಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ. ರಾಜ್ಯದ ಹವಮಾನದಲ್ಲಿನ ಸ್ವಾಭಾವಿಕ ಸಸ್ಯವರ್ಗ, ಬೆಳೆಗಳ ವೈವಿಧ್ಯತೆಯಿಂದಾಗಿ ರಾಜ್ಯದಲ್ಲಿ ಜೇನು ಕೃಷಿಗೆ ಅತ್ಯಂತ ಪೂರಕವಾಗಿದೆ ಎಂಸಿದರು.
ಹಿರಿಯ ಕ್ಷೇತ್ರ ಅಧೀಕ್ಷ ಡಾ.ಸಂಗಣ್ಣ ಸಜ್ಜನರ್ ಮಾತನಾಡಿದರು. ವಿಜ್ಞಾನಿ ಡಾ.ಕೆ.ಜೆ.ಹೇಮಲತಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಹಿರೇಮಠ, ಆಹಾರ ಸಂಸ್ಕರಣಾ ತಂತ್ರಜ್ಞಾನ ವಿಜ್ಞಾನಿ ಟಿ.ವೀಣಾ, ಮಣ್ಣು ವಿಜ್ಞಾನಿ ಡಾ.ಎಸ್.ಎನ್.ಭಟ್ ಇದ್ದರು.