ರಾಯಚೂರು ಬಂದ್ ತಾತ್ಕಾಲಿಕ ಮುಂದೂಡಿಕೆ

MAHANTESH PATIL ATTANUR PRESS MEET (1)
Published on

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಅ.25ರಂದು ನಡೆಸಲು ಉದ್ದೇಶಿಸಿದ್ದ ರಾಯಚೂರು ಬಂದ್ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಟಿಎಲ್‌ಬಿಸಿ ಮೈಲ್ 104ರ ಕೆಳಭಾಗದ ರೈತ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಜನಪ್ರತಿನಿಗಳು, ಅಕಾರಿಗಳ ಸಹಕಾರದಿಂದ ಕಾಲುವೆಯಲ್ಲಿ ಪ್ರಸ್ತುತ ಗೇಜ್ ನಿರ್ವಹಣೆಯಾಗುತ್ತಿರುವ ಕಾರಣ ಬಂದ್ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದರು.
ಅ.16ರಿಂದ ಕೊನೆಭಾಗಕ್ಕೆ ನೀರು ಒದಗಿಸುವಂತೆ ಆಗ್ರಹಿಸಿ ಸಂಚಾರ ತಡೆ ಸೇರಿದಂತೆ ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೋರಾಟದ ಭಾಗವಾಗಿ ಅ.25ರಂದು ರಾಯಚೂರು ಬಂದ್ ನಡೆಸಲು ನಿರ್ಧರಿಸಿದಾಗ ಎಲ್ಲ ಸಂಘ ಸಂಸ್ಥೆಗಳು ಅದಕ್ಕೆ ಬೆಂಬಲ ಸೂಚಿಸಿದ್ದವು.
ಜನಪ್ರತಿನಿಗಳು, ಅಕಾರಿಗಳು ನೀಡಿದ ಭರವಸೆಯಂತೆ ಮೈಲ್ 104ರಲ್ಲಿ 6.50 ಗೇಜ್ ಕಾಪಾಡುತ್ತಿದ್ದು, ಗಣೇಕಲ್ ಜಲಾಶಯಕ್ಕೆ 10 ಅಡಿ ನೀರು ಹರಿಸಲಾಗಿರುವುದರಿಂದ ಬಂದ್ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.
ನೀರಾವರಿ ಇಲಾಖೆ ಅಕಾರಿಗಳ ವೈಲ್ಯದಿಂದ ಕಾಲುವೆಯಲ್ಲಿ ನಿಗದಿತ ಗೇಜ್ ನಿರ್ವಹಣೆ ಮಾಡಲಾಗುತ್ತಿಲ್ಲ. ಪ್ರಸ್ತುತ ಗೇಜ್ ಕಾಪಾಡುತ್ತಿರುವುದನ್ನು ಮುಂದುವರಿಸಬೇಕು. ಐಸಿಸಿ ತೀರ್ಮಾನದಂತೆ ಕಾಲುವೆಗೆ ನ.31ರವರೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಬಂದ್ ನಿರ್ಧಾರವನ್ನು ಪುನರ್ ಪರಿಶೀಲಿಸಲಾಗುವುದು ಎಂದು ಮಹಾಂತೇಶ ಪಾಟೀಲ್ ಅತ್ತನೂರು ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪದಾಕಾರಿಗಳಾದ ಸಿದ್ದನಗೌಡ ನೆಲಹಾಳ, ನಾಗನಗೌಡ ಹರವಿ, ಶರಣಪ್ಪ ಕಲ್ಮಲಾ, ಬಸವರಾಜ ಕಲ್ಲೂರ, ವೆಂಕಟೇಶ ರೆಡ್ಡಿ, ವಿಶ್ವೇಶ್ವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net