ಯತ್ನಾಳ ವಿರುದ್ಧ ಕಾನೂನು ಕ್ರಮಕೈಗೊಳ್ಳಿ

091122 Raichur Karnataka State Banajiga Samaj Welfare Association Protest
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
Published on

ರಾಯಚೂರು: ಬಣಜಿಗ ಸಮುದಾಯದ ಬಗ್ಗೆ ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ನೇತಾಜಿ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನಕ್ಕೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು.

ಹುಕ್ಕೇರಿಯಲ್ಲಿ ಪಂಚಮಸಾಲಿ ಸಭೆಯಲ್ಲಿ ಶಾಸಕ ಯತ್ನಾಳ ಬಣಜಿಗ ಸಮುದಾಯ ಮತ್ತು ಸಮುದಾಯದ ಜನರ ವ್ಯವಹಾರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಜನರಿಗೆ ನೋವುಂಟು ಮಾಡಿದ್ದಾರೆ. ಜನಪ್ರತಿನಿಧಿಯಾಗಿ ಸರ್ವ ಜನಾಂಗಕ್ಕೆ ಒಳಿತು ಮಾಡುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ್ದು, ಬೇರೆ ಸಮುದಾಯಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿರುವುದು ಜನರಿಗೆ ಬಗೆದಿರುವ ದ್ರೋಹವಾಗಿದೆ.

ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಸರ್ಕಾರ ಯತ್ನಾಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಮೂಲಕ ಮನಬಂದಂತೆ ಮಾತನಾಡುವವರಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಪ್ರಮುಖರಾದ ಸೂಗಪ್ಪ ಚುಕ್ಕಿ, ಶರಣಬಸಪ್ಪ ಅರಳಿ, ಮಲ್ಲಿಕಾರ್ಜುನ ಹಳ್ಳೂರು, ಮಲಕಪ್ಪ ಪಾಟೀಲ್, ಎನ್.ಅಮರೇಶ, ಪ್ರಕಾಶ ಖೇಣೇದ, ಶೇಖರ ಯರದಿಹಾಳ, ದಾನಮ್ಮ, ಶಶಿಕಲಾ ದೇವಸುಗೂರು, ಸರ್ವಮಂಗಳಾ ಸಕ್ರಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net