

ರಾಯಚೂರು: ತ್ಯಾಗ, ಬಲಿದಾನದ ಮಹತ್ವವನ್ನು ಸಾರುವ ಬಕ್ರೀದನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಭಾನುವಾರ ಆಚರಿಸಿದರು. ಹಬ್ಬದ ನಿಮಿತ್ತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಕಷ್ಟಗಳನ್ನು ಪರಿಹರಿಸುವಂತೆ ಪ್ರಾರ್ಥಿಸಿದರು. ಮುಸ್ಲಿಂ ಧರ್ಮ ಗುರುಗಳು ವಿಶೇಷ ಪ್ರಾರ್ಥನೆ ಮಾಡಿ, ಜನರ ಕಷ್ಟ-ಕಾರ್ಪಣ್ಯಗಳು ದೂರವಾಗಿ ದೇಶದಲ್ಲಿ ಸುಖ, ಶಾಂತಿ ನೆಲೆಸಲಿ ಎಂದು ಕೋರಿದರು. ಮಾಜಿ ಶಾಸಕ ಸೈಯದ್ ಯಾಸೀನ್, ಪ್ರಮುಖರಾದ ರವಿ ಬೋಸರಾಜು, ರಾಮನಗೌಡ ಏಗನೂರು, ಉಮರ್ ಫಾರೂಕ್, ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಬಿ.ರಮೇಶ, ಅರುಣ ದೋತರಬಂಡಿ ಇತರರಿದ್ದರು.