

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರವಾನೆ | ಕೆಆರ್‌ಎಸ್ ಮತ್ತು ಹಸಿರು ಸೇನೆ ಪ್ರತಿಭಟನೆ
ರಾಯಚೂರು: ಮಳೆ, ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ನೀಡದಷ್ಟು ದಿವಾಳಿಯಾಗಿರುವ ಸರ್ಕಾರಕ್ಕೆ ರೈತರು ಶುಕ್ರವಾರ ನಗರದಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರವಾನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ತೀನ್‌ಕಂದೀಲ್‌ನಿಂದ ಸರಾಫ್ ಬಜಾರ್, ಪಟೇಲ್ ರಸ್ತೆ ಮಾರ್ಗವಾಗಿ ಭಿಕ್ಷೆ ಬೇಡುತ್ತಾ ಡಿಸಿ ಕಚೇರಿ ವರೆಗೆ ಸಾಗಿ, ನಂತರ ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಮನವಿ ಸಲ್ಲಿಸಿದರು.
ಅತಿವೃಷ್ಟಿ, ಪ್ರವಾಹದಿಂದಾದ ನಷ್ಟಕ್ಕೆ ಪರಿಹಾರ ನೀಡಬೇಕು. ಫಸಲ್‌ಬಿಮಾ ಯೋಜನೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಮನೆ ಬಿದ್ದವರಿಗೆ ಹೊಸ ಮನೆ ಕಟ್ಟಿಸಿಕೊಡಬೇಕು. ಪ್ರಸಕ್ತ ತಿಂಗಳಲ್ಲಿ ಸುರಿದ ಮಳೆಗೆ ಬೆಳೆ ಹಾನಿ ಬಗ್ಗೆ ಸರ್ವೇ ನಡೆಸಿ ಪರಿಹಾರ ನೀಡಬೇಕು. ಹತ್ತಿ, ಭತ್ತ, ತೊಗರಿ, ಜೋಳ, ಸಜ್ಜೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗದಂತೆ ಸೂಕ್ತ ಕಾನೂನು ರಚಿಸಬೇಕು. ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಧ್ಯಕ್ಷ ಸೂಗೂರಯ್ಯಸ್ವಾಮಿ, ಪದಾಧಿಕಾರಿಗಳಾದ ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ ಬಲ್ಲಟಗಿ, ಮಲ್ಲಣ್ಣ ದಿನ್ನಿ, ಬಸವರಾಜ, ಬೂದೆಯ್ಯಸ್ವಾಮಿ, ಭೀಮೇಶ್ವರಾವ್, ಬಸ್ಸಪ್ಪ ಪೂಜಾರಿ, ದೇವರಾಜ ನಾಯಕ ಹಾಗೂ ಇತರರಿದ್ದರು.