

ರಾಯಚೂರು: ಆಲಮಟ್ಟಿ-ಯಾದಗಿರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಕುರಿತು ಸಂಸದ ಜಿ.ಕುಮಾರನಾಯಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಗುರುವಾರ ದೆಹಲಿಯಲ್ಲಿ ಭೇಟಿ ಮಾಡಿ ಯೋಜನೆಯ ಕುರಿತು ಚರ್ಚಿಸಿದರು.
ಪ್ರವಾಸೋದ್ಯಮ ಚಟುವಟಿಕೆಗೆ ಈ ರೈಲು ಮಾರ್ಗ ಹೆಚ್ಚು ನೆರವಾಗಲಿದೆ. ವಿಜಯಪುರ ಮತ್ತು ಯಾದಗಿರಿ ನಡುವಿನ ಪ್ರಸ್ತುತ ರೈಲು ಮಾರ್ಗದ ದೂರವು 338 ಕಿ.ಮೀಗಳಷ್ಟಿದ್ದು, ಜನರು ಹೊಟಗಿ, ಕಲಬುರಗಿ ಮತ್ತು ವಾಡಿ ಮೂಲಕ ಯಾದಗಿರಿಗೆ ಪ್ರಯಾಣಿಸುತ್ತಿದ್ದಾರೆ. ಈ ಹೊಸ ರೈಲ್ವೆ ಮಾರ್ಗ ನಿರ್ಮಾಣವಾದರೆ ಅಂತರವು 165ಕಿ.ಮೀಗೆ ತಗ್ಗಲಿದೆ. ಇದರಿಂದ ಕೃಷಿ ಉತ್ಪನ್ನಗಳ ವಹಿವಾಟಿಗೂ ಅನುಕೂಲವಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಪ್ರಾರಂಭಿಸುವ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿವೆ. ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದ್ದು, ಇದರಿಂದ ಬಹುತೇಕ ರೈತರಿಗೆ ಮತ್ತು ಜನಸಾಮನ್ಯರಿಗೆ ಸುಲಭ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ರೈಲು ಮಾರ್ಗದಿಂದ ಯಾದಗಿರಿ ಜಿಲ್ಲೆ ಹಾಗೂ ಹುಣಸಗಿ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಅಭಿವೃದ್ಧಿ ಹೊಂದಲಿದ್ದು ಜತೆಗೆ ಈ ಭಾಗದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಳವಾಗಲಿವೆ ಎಂದು ತಿಳಿಸಿದರು.