ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿ, ರಾಯಚೂರಿನಲ್ಲಿ ರಕ್ತದಲ್ಲಿ ಸಹಿ ಸಂಗ್ರಹ ಅಭಿಯಾನ ವಿವಿಧೆಡೆ ಪ್ರತಿಭಟನೆ

010722 Blood Signature for AIMS
ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಆರಂಭಿಸಿರುವ ರಕ್ತದಲ್ಲಿ ಸಹಿ ಸಂಗ್ರಹ ಅಭಿಯಾನದಲ್ಲಿ ಸ್ವಾತಂತ್ರ ಹೋರಾಟಗಾರ ಪಂಪಣ್ಣ ರಕ್ತದಲ್ಲಿ ಶುಕ್ರವಾರ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
Published on

ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದೆ. ನಗರದಲ್ಲಿ 50 ದಿನಗಳಿಂದ ಧರಣಿ ನಡೆಸುತ್ತಿರುವ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಶುಕ್ರವಾರದಿಂದ ರಕ್ತದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಒಂದು ವಾರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಕಳುಹಿಸಲು ತೀರ್ಮಾನಿಸಲಾಗಿದೆ.

ಸ್ಥಳೀಯ ಜಿಲ್ಲಾ ಕ್ರೀಡಾಂಗಣ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಸ್ವಾತಂತ್ರೃ ಹೋರಾಟಗಾರ ಪಂಪಣ್ಣ ಮನವಿ ಪತ್ರಕ್ಕೆ ರಕ್ತದಲ್ಲಿ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. 300ಕ್ಕೂ ಹೆಚ್ಚು ಜನರು ರಕ್ತದಲ್ಲಿ ಸಹಿ ಹಾಕಿದರು. ರಕ್ತ ತೆಗೆಯಲು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸಹಕಾರ ನೀಡಿದರು.

ಡಾ.ಡಿ.ಎಂ.ನಂಜುಂಡಪ್ಪ ವರದಿ ಶಿಫಾರಸಿನಂತೆ ಜಿಲ್ಲೆಗೆ ಐಐಟಿ ಮಂಜೂರು ಮಾಡಬೇಕಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಧಾರವಾಡಕ್ಕೆ ಐಐಟಿ ತೆಗೆದುಕೊಂಡು ಹೋಗಿ ಜಿಲ್ಲೆಗೆ ವಂಚನೆ ಮಾಡಲಾಯಿತು. ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದ್ದರು.

ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್ ಹಾಗೂ ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಮಂಜೂರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸುವ ಮೂಲಕ ಏಮ್ಸ್ ಸ್ಥಾಪನೆ ವಿಚಾರದಲ್ಲಿಯೂ ಜಿಲ್ಲೆಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಂದ ರಕ್ತದಲ್ಲಿ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲು ಹೋರಾಟ ಸಮಿತಿ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net