

ರಾಯಚೂರು: ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿವೆ. ಪ್ರಾದೇಶಿಕ ಅಸಮಾತೋಲನೆ ಹೋಗಲಾಡಿಸಲು ಹಾಗೂ ಡಾ.ನಂಜುಂಡಪ್ಪ ವರದಿ ಶಿಫಾರಸ್ಸಿನ ಮೇರೆಗೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಏಮ್ಸ್ ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ಒತ್ತಾಯಿಸಿದರು.
ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ಬಳಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು. ಧರಣಿಗೆ ಭಾರತೀಯ ವೈದ್ಯಕೀಯ ಸಂಘ ಬೆಂಬಲಿಸಿದೆ. ಜಿಲ್ಲೆಯ ಎಲ್ಲ ಸಂಘ, ಸಂಸ್ಥೆಗಳು ಬೆಂಬಲಿಸಿದರೂ ಸರ್ಕಾರ ಮಂಡುತನ ಬಿಡುತ್ತಿಲ್ಲ ಎಂದು ದೂರಿದರು.
ಐಎಂಎ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಮಹಾಲಿಂಗಪ್ಪ ಮಾತನಾಡಿ, ಸರ್ಕಾರದ ದ್ವಂದ್ವ ನೀತಿಗಳಿಂದಾಗಿ ನಮಗೆ ಬರಬೇಕಾಗಿದ್ದ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನೆ ನಿವಾರಿಸಬೇಕೆಂದು ಆಗ್ರಹಿಸಿದರು.