

ರಾಯಚೂರು: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜಿಲ್ಲೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಂಜೂರಾಗುವಲ್ಲಿ ಹಿನ್ನಡೆಯುಂಟಾಗಿದ್ದು, ಏಮ್ಸ್ ಮಂಜೂರಾತಿಗಾಗಿ ನಿರ್ಣಾಯಕ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ತಿಳಿಸಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಈಗಾಗಲೇ ಜಿಲ್ಲೆಗೆ ಮಂಜೂರಾಗಬೇಕಾಗಿದ್ದ ಐಐಟಿಯನ್ನು ಕುತಂತ್ರದಿಂದ ತಪ್ಪಿಸಲಾಗಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಏಮ್ಸ್ ಕೂಡ ನಮ್ಮ ಕೈತಪ್ಪಲಿದೆ ಎಂದರು.
ಏಮ್ಸ್ ಆರಂಭವಾದಲ್ಲಿ ಖಾಸಗಿ ಆಸ್ಪತ್ರೆಗೆ ತೊಂದರೆಯಾಗಲಿದೆ ಎನ್ನುವ ಆತಂಕ ಹಲವು ಖಾಸಗಿ ವೈದ್ಯರಲ್ಲಿದೆ. ಏಮ್ಸ್ ಆರಂಭದಿಂದ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಅನುಕೂಲವಿದೆಯೇ ಹೊರತು ಖಾಸಗಿ ಆಸ್ಪತ್ರೆಗಳಿವೆ ಯಾವುದೇ ಧಕ್ಕೆಯಾಗುವುದಿಲ್ಲ. ಒಪೆಕ್ ನೆರವಿನಿಂದ ನಗರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಆಸ್ಪತ್ರೆ ಜಿಲ್ಲೆಗೆ ಮಂಜೂರಾಗಲು ಯಾವ ರಾಜಕೀಯ ನಾಯಕರು ಕಾರಣರಲ್ಲ. ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮುತುವರ್ತಿ ಕಾರಣವಾಗಿತ್ತು ಎಂದರು.
ಸ್ವಾತಂತ್ರೃ ನಂತರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಅನ್ಯಾಯ ಮಾಡುತ್ತಾ ಬಂದಿದೆ. ಐಐಟಿ ವಿಷಯದಲ್ಲಿ ನಮಗೆ ಆಗಿರುವ ಅನ್ಯಾಯವನ್ನು ಕಂಡು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಏಮ್ಸ್‌ಗೆ ಪ್ರಯತ್ನ ನಡೆಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ರಾಯಚೂರು, ಕೊಪ್ಪಳ ಸಂಸದರು ಹಾಗೂ ಜಿಲ್ಲೆಯ ಇಬ್ಬರು ಶಾಸಕರು ಏಮ್ಸ್‌ಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಇತರ ಪಕ್ಷಗಳ ಶಾಸಕರು ಅವರಿಗೆ ಬೆಂಬಲ ನೀಡಲು ಮುಂದಾಗಬೇಕಾಗಿದೆ ಎಂದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಜನರ ಭಾವನೆಗಳಿಗೆ ಸರ್ಕಾರ, ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂಬರುವ ಚುನಾವಣೆಯಲ್ಲಿ ಏಮ್ಸ್ ವಿಚಾರ ಪ್ರಮುಖವಾಗಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಏಮ್ಸ್ ಮಂಜೂರಾತಿಗಾಗಿ ಪಕ್ಷಬೇಧ ಮರೆತು ಹೋರಾಟವನ್ನು ನಡೆಸಲಾಗುವುದು ಎಂದರು.