

ರಾಯಚೂರು: ಆಲ್‌ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ) ವತಿಯಿಂದ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನವು ನ.27ರಿಂದ 29ರವರೆಗೆ ದೆಹಲಿಯಲ್ಲಿ ನಡೆಯಲಿದೆ ಎಂದು ಸಂಘಟನೆ ರಾಜ್ಯ ಸಮಿತಿ ಸದಸ್ಯೆ ಬಿ.ಕೆ.ಶಿಲ್ಪಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಶಿಕ್ಷಣ ವ್ಯಾಪಾರೀಕರಣವಾಗಿದೆ. ಶಾಲೆಗಳು ಖಾಸಗೀಕರಣಕ್ಕೆ ಸಿಲುಕಿ ಸಾರ್ವಜನಿಕ ಶಿಕ್ಷಣವು ದಿಕ್ಕು ತಪ್ಪಿಹೋಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಬದಲು ಮತ್ತಷ್ಟು ಗೊಂದಲವನ್ನುಂಟು ಮಾಡುತ್ತಿವೆ ಎಂದರು.
ವಿದ್ಯಾರ್ಥಿ ವಿರೋಧಿಯಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ರದ್ದಾಗಿದೆ ಆದರೆ ದೇಶದ ಅನೇಕ ರಾಜ್ಯಗಳಲ್ಲಿ ಮುಂದುವರೆಸಿ ಖಾಸಗಿ ಶಿಕ್ಷಣ ಒತ್ತು ನೀಡುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿಸುವುದು, ಶಾಲೆಗಳಿಗೆ ಶಿಕ್ಷಕರೇ ಇಲ್ಲದಂತೆ ಮಾಡುವ ಮೂಲಕ ಸರ್ಕಾರಗಳೇ ಶಿಕ್ಷಣದ ಹಕ್ಕು ಕಸಿಯುವ ಕೆಲಸ ಮಾಡುತ್ತಿವೆ ಎಂದು ದೂರಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪೀರಸಾಬ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಇದ್ದರು.