ಕೃಷಿ ವಲಯ ಉಳಿದರ ದೇಶ ಸಮೃದ್ಧ: ಶಿವಕುಮಾರ ಸ್ವಾಮೀಜಿ

krishi mela chalane
Published on

ರಾಯಚೂರು: ವ್ಯವಸಾಯದಲ್ಲಿ ನಂಬಿಕೆ ಮತ್ತು ಶ್ರದ್ಧೆ ಅತ್ಯಂತ ಮುಖ್ಯ. ಕೃಷಿ ವಲಯದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಮುಂಡರಗಿಯ ಕಪ್ಪದಗುಡ್ಡ ನಂದವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕೃಷಿ ಮೇಳಕ್ಕೆ ಗೋಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಶನಿವಾರ ಮಾತನಾಡಿದರು.

ಒಕ್ಕಲುತನ ಎಂಬುವುದು ಶ್ರೇಷ್ಠ ಕೆಲಸವಾಗಿದ್ದು, ಆದರೆ ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಕೆಲಸವೇ ಶ್ರೇಷ್ಠವೆಂದು ಭಾವಿಸಲಾಗುತ್ತಿದೆ. ಇದರಿಂದ ಹೊರಬಂದು ಕೃಷಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಕೃಷಿ ವಲಯ ಉಳಿದಾಗ ಮಾತ್ರ ದೇಶ ಸಮೃದ್ಧವಾಗಲಿದೆ ಎಂದು ತಿಳಿಸಿದರು.

ಮಣ್ಣು ಎಂಬುವುದು ರೈತನ ಕಣ್ಣುಗಳಿದ್ದಂತೆ. ಪ್ರಸ್ತುತ ಮಣ್ಣು ಕಾಂಕ್ರೀಟ್ ಆಗಿ ಮಾರ್ಪಟ್ಟು ವಿಷವಾಗಿಬಿಟ್ಟಿದೆ. ಮಣ್ಣಿನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತಂತ್ರಜ್ಞಾನದ ವೇಗದಿಂದ ಪ್ರತಿಯೊಂದು ವಸ್ತುಗಳು ಆಧುನಿಕ ರೂಪವನ್ನು ಪಡೆದುಕೊಳ್ಳುತ್ತಿವೆ. ದೊಡ್ಡ ಮನೆಗಳನ್ನು ಕಟ್ಟಲಾಗುತ್ತಿದೆ ಆದರೆ ಮನೆಗಳಲ್ಲಿ ಗೋವುಗಳಿಗೆ ಜಾಗವಿಲ್ಲದಂತಾಗಿದೆ. ಕೃಷಿ ಬೇಕು ಆದರೆ ಕೃಷಿಗೆ ಅಗತ್ಯವಿರುವ ಆಕಳು, ಎತ್ತುಗಳು ಬೇಡವಾಗಿವೆ. ಮರಗಳನ್ನು ಬೆಳೆಸಲು ಸಮಯವಿಲ್ಲ. ಬೆಳೆದ ಮರದಿಂದ ಮಳೆಯನ್ನು ಮಾತ್ರ ನಿರೀಕ್ಷಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸನಗೌಡ ಬ್ಯಾಗವಾಟ, ಮಲ್ಲೇಶ ಕೊಲಮಿ, ಮಧುಸೂಧನ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚಾವಡಿ, ಡಿ.ಮಲ್ಲಿಕಾರ್ಜುನ, ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ಎಂ.ವೀರನಗೌಡ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎನ್.ಶಿವಶಂಕರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net