

ರಾಯಚೂರು: ರೈತರು ಶ್ರಮಪಟ್ಟು ದೇಶಕ್ಕೆ ಅನ್ನವನ್ನು ನೀಡುತ್ತಾರೆ. ರೈತರಿಗೆ ಬೇಸಾಯ ಕ್ರಮಗಳು ಮತ್ತು ವ್ಯವಸಾಯದಲ್ಲಿ ತಾಂತ್ರಿಕತೆ ಬಳಕೆಯ ಬಗ್ಗೆ ಕಾಲಕಾಲಕ್ಕೆ ಕೃಷಿ ವಿವಿ ಮಾಹಿತಿಯನ್ನು ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಶರಣಗೌಡ ಬಯ್ಯಪುರ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಹಮ್ಮಿಕೊಂಡಿದ್ದ ಹಿಂಗಾರು ಬೀಜದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿ, ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಪ್ರಗತಿಪರರಾಗಬೇಕು. ಕೃಷಿ ವಿಜ್ಞಾನಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು. ರೈತರು ಬೆಳೆಯುವ ಬೆಳೆಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದರು.
ಉತ್ತರ ಪ್ರದೇಶದ ಭಾರತೀಯ ಬೀಜ(ಮಾವು) ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಂಜಯ್ ಕುಮಾರ್ ಮಾತನಾಡಿ, ದೇಶದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯವು ತನ್ನದೇ ಆದ ಸ್ಥಾನಮಾನವನ್ನು ಹೊಂದಿದ್ದು, ಜನಸಂಖ್ಯೆ ಹೆಚ್ಚಾದಂತೆ ಕೃಷಿ ಭೂಮಿಯು ಕಡಿಮೆಯಾಗುತ್ತಾ ಸಾಗಿದೆ ಇದರಿಂದ ಅವಶ್ಯಕ ಆಹಾರ ಸಾಮಗ್ರಿಗಳು ಉತ್ಪಾದನೆ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಡಿ.ಮಲ್ಲಿಕಾರ್ಜುನ, ಮಲ್ಲೇಶ ಕೊಲಿಮಿ, ಮಧುಸೂಧನ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚವಡಿ, ವಿವಿ ಕುಲಪತಿ ಡಾ.ಎಂ ಹನುಮಂತಪ್ಪ, ಕುಲಸಚಿವ ಡಾ.ಎಂ ವೀರನಗೌಡ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವಿ ಹುಣಜಿ, ಕೃಷಿ ವಿವಿಯ ಬೀಜ ಘಟಕದ ವಿಶೇಷಾಧಿಕಾರಿ ಡಾ.ಅರಣಕುಮಾರ್ ಹೊಸಮನಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಯಪ್ರಕಾಶ್, ವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎನ್ ಶಿವಶಂಕರ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಕೆ. ನಾರಾಯಣರಾವ್, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಡೀನ್ ಡಾ.ಎಸ್.ಬಿ ಗೌಡಪ್ಪ, ಆಡಳಿತಾಧಿಕಾರಿ ಡಾ.ಬಿ ಜಾಗೃತಿ ದೇಶಮಾನೆ, ಗ್ರಂಥಪಾಲಕ ಡಾ.ಮಚೇಂದ್ರನಾಥ, ಹಣಕಾಸು ನಿಯಂತ್ರಾಣಾಧಿಕಾರಿ ಕೆ.ಹನುಮೇಶ್ ಸೇರಿದಂತೆ ಇತರರಿದ್ದರು.