

ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಪ್ರತಿಭಟನೆ
ರಾಯಚೂರು: ಜನ ಹಾಗೂ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂ ಕುಮಾರಗೆ ಸಲ್ಲಿಸಿತು. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿವೆ. ರೈತರ ಎಲ್ಲ ಬೆಳೆಗಳಿಗೂ ಖಾತ್ರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿ ದೊರೆಯುವಂತೆ ಕಾಯ್ದೆ ಮಾಡಬೇಕು. ಋಣ ಮುಕ್ತ ಕಾಯ್ದೆಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು. ಭೂಮಿ ಇಲ್ಲದ ಬಡವರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗೆ ಸಾಗುವಳಿ ಚೀಟಿ ನೀಡಿ ಸಕ್ರಮಗೊಳಿಸಬೇಕು. ನಿವೇಶನ ರಹಿತರಿಗೆ ನಿವೇಶನ, ವಸತಿ ಹಂಚಿಕೆ ಮಾಡಲು ಸಮಗ್ರ ಯೋಜನೆ ಘೋಷಣೆ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಮತ್ತಿತರ ವಸ್ತುಗಳ ಬೆಲೆ ಇಳಿಸಬೇಕು. ಸರ್ಕಾರಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಗ್ರಾಪಂ ನೌಕರರನ್ನು ಖಾಯಂಗೊಳಿಸಬೇಕು. ಬಾಕಿ ವೇತನ ಕೂಡಲೇ ಪಾವತಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಮುಖರಾದ ವರಲಕ್ಷ್ಮಿ, ಎಂ.ರವಿ, ಶ್ರೀಧರ, ಶರಣಗೌಡ, ಪ್ರವೀಣರೆಡ್ಡಿ ಗುಂಜಳ್ಳಿ, ಈರಮ್ಮ, ಲಕ್ಷ್ಮಿ, ನಾಗರಾತ್ನ, ಶಾರದಾ ಪಾಲ್ಗೊಂಡಿದ್ದರು.