ಸರ್ವ ಸಮೂಹವನ್ನು ಸೆಳೆಯುವ ಕೃಷಿ ಜಾತ್ರೆ

krishi mela
Published on

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾದ ಕೃಷಿಮೇಳ ಹಬ್ಬದ ವಾತವರಣ ಸೃಷ್ಠಿಸಿದೆ. ಸರ್ವ ಸಮೂಹವನ್ನು ಆಕರ್ಷಿಸುವ ಕೃಷಿ ಜಾತ್ರೆಗೆ ಶನಿವಾರ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ, ಕೃಷಿ ಮೇಳದ ಮೊದಲ ದಿನವೇ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಮೇಳದಲ್ಲಿ ಸುತ್ತಾಡಿ ಸಂತಸಪಟ್ಟರು.

ಪ್ರತಿವರ್ಷವೂ ರೈತರಿಗಾಗಿ, ರೈತರಿಗೋಸ್ಕರವೇ ಆಯೋಜನೆ ಮಾಡಲಾಗುವ ಕೃಷಿ ಮೇಳ ನಿಜಕ್ಕೂ ಕಲ್ಯಾಣ ಕರ್ನಾಟಕ ಭಾಗದ ವಿಶೇಷ ಉತ್ಸವವಾಗಿದೆ. ಮೂರು ದಿನಗಳ ವರೆಗೆ ನಡೆಯುವ ಮೇಳವು ವಿಶೇಷವಾಗಿ ರೈತರನ್ನು ತನ್ನತ್ತ ಸೆಳೆಯುತ್ತದೆ.

ಈ ಬಾರಿಯ ಕೃಷಿ ಮೇಳ ಹಲವು ವೈಶಿಷ್ಠೃತೆಗಳನ್ನು ತನ್ನಲ್ಲಿ ತುಂಬಿಕೊಂಡಿದ್ದು, ಶನಿವಾರ ಆರಂಭವಾಗಿ ಡಿ.9ರವರೆಗೆ ನಡೆಯಲಿದೆ.

ರೈತರಿಗೆ ಕೃಷಿಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೇಳ ಪ್ರತಿವರ್ಷವೂ ಒಂದೊಂದು ಘೋಷವಾಕ್ಯದಡಿ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ‘ಹವಾಮಾನ ವೈಪರಿತ್ಯಕ್ಕೆ ಸುಸ್ಥಿರ ಕೃಷಿ’ ಎಂಬ ಘೋಷವಾಕ್ಯದಡಿ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ರೈತರಿಗೆ ಹವಾಮಾನ ಬದಲಾವಣೆಯ ಸಮಯದಲ್ಲೂ ಉತ್ತಮ ಕೃಷಿಯನ್ನು ಹೇಗೆ ಮಾಡಬಹುದು ಮತ್ತು ಕೃಷಿಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ.

ಕೃಷಿ ಹಾಗೂ ಕೃಷಿ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಆವಿಷ್ಕಾರಗಳ ಕುರಿತು ರೈತಬಾಂದವರಿಗೆ ಮಾಹಿತಿ ನೀಡುವ ಹಾಗೂ ಪ್ರಾತ್ಯಕ್ಷತೆಯನ್ನು ಒದಗಿಸುವ ಜತೆಗೆ ತಮ್ಮ ಜಮೀನಿನಲ್ಲಿ ಅಳವಡಿಸುವ ಕುರಿತು ಪ್ರೇರೇಪಿಸುವ ಉದ್ದೇಶವನ್ನು ವಿವಿ ಹೊಂದಿದೆ.

ಮೇಳದಲ್ಲಿ ಏನೇನಿದೆ?: ಮೂರು ದಿನಗಳ ಕೃಷಿ ಮೇಳದಲ್ಲಿ ಈ ಭಾಗದ ಮುಖ್ಯ ಕೃಷಿ ಬೆಳೆಗಳ ಉತ್ಪಾಧನಾ ತಾಂತ್ರಿಕತೆಗಳು, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಗಳ ಸಮೀಕರಣ, ತೋಟಗಾರಿಕೆಯಲ್ಲಿ ಉತ್ಕೃಷ್ಠ ಹಣ್ಣು, ತರಕಾರಿ ಹಾಗೂ ಹೂವುಗಳ ಉತ್ಪಾದನಾ ತಂತ್ರಜ್ಞಾನಗಳು, ರಫ್ತು ವಹಿವಾಟು, ಫಲಪುಷ್ಪ ಪ್ರದರ್ಶನ, ರೇಷ್ಮೆ ಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಎರೆಗೊಬ್ಬರ ಉತ್ಪಾದನೆ, ಜೈವಿಕ ಗೊಬ್ಬರ, ಸಾವಾಯುವ ಗೊಬ್ಬರಗಳ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಪ್ರಾತ್ಯ್ಯಕ್ಷತೆ ಹಾಗೂ ಜಾನುವಾರ ಪ್ರದರ್ಶನ, ಮತ್ಸೃಮೇಳ ಸೇರಿದಂತೆ ಇತರೆ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ನಿಡಲಾಗುತ್ತದೆ.

ಮಳಿಗೆಗಳೆಷ್ಟು?: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣ ಪಕ್ಕದ ಆವರಣದಲ್ಲಿ ಮೇಳದ ಮಳಿಗೆಗಳು ಮತ್ತು ವೇದಿಕೆಯಿದ್ದು, 240 ಮಳಿಗೆಗಳನ್ನು ವ್ಯವಸ್ಥಿತವಾಗಿ ಹಾಗೂ ಸುಸಜ್ಜಿತವಾಗಿ ಸ್ಥಾಪಿಸಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇತರೆ ಭಾಗಗಳಿಂದ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಬಹುದೆಂದು ವಿವಿ ನಿರೀಕ್ಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net