

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಮೂರು ದಿನಗಳವರೆಗೆ ನಡೆಯುತ್ತಿರುವ ಕೃಷಿ ಮೇಳದ ಎರಡನೇ ದಿನವಾದ ಭಾನುವಾರ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾನುವಾರ ರಜೆಯಾದ್ದರಿಂದ ಕುಟುಂಬಸಮೇತರಾಗಿ ಮೇಳಕ್ಕೆ ಬಂದಿದ್ದು, ಕೃಷಿ ಮೇಳಕ್ಕೆ ಕಳೆ ತಂದಿತ್ತು.
ಕೃಷಿ ಮೇಳದ ಪ್ರವೇಶ ಕಮಾನನಿಂದ ನಿಂತು ಮುಂದೆ ನೋಡಿದಾಗ ವಿಶಾಲವಾದ ಮೈದಾನದಲ್ಲಿ ಎದುರಿಗೆ ಬೃಹತ್ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೈದಾನ ತುಂಬೆಲ್ಲಾ ರೈತರಿಗೆ ಉಪಯುಕ್ತವಾದ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಸುತ್ತಲೂ ಇರುವ ಮಳಿಗೆಗಳು ಅನೇಕ ವಿಷಯಗಳ ಕುರಿತು ಮಾಹಿತಿ, ಉಪಯುಕ್ತ ವಸ್ತುಗಳ ವ್ಯಾಪಾರ ವಹಿವಾಟು ಜನರನ್ನು ಇನ್ನೂ ಆಕರ್ಷಿಸುತ್ತಿತ್ತು.
ಕೃಷಿ ಮೇಳಕ್ಕೆ ಭಾನುವಾರ 2.2 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು. ಕೃಷಿ ಮೇಳ ರೈತರಿಗೆ ಪೂರಕವಾಗಿತ್ತು. ಟ್ರಾಕ್ಟರ್, ಕಟಾವು ಯಂತ್ರಗಳು, ನಾಟಿ ಯಂತ್ರಗಳು, ಕಳೆ ತೆಗೆಯುವ ಯಂತ್ರಗಳ ಪ್ರಾತ್ಯಕಿಕೆಗಳು ರೈತರನ್ನು ಸೆಳೆಯುತ್ತಿದ್ದವು.
ಮೈದಾನದದಲ್ಲಿ ಯಂತ್ರೋಪಕರಣಗಳು ರೈತರನ್ನು ಆಕರ್ಷಿಸುತ್ತಿದ್ದರೇ, ಮಳಿಗೆಗಳಲ್ಲಿ ಕೃಷಿ ಉತ್ಪನ್ನಗಳು, ಗೃಹ ಬಳಕೆ ವಸ್ತುಗಳ ಮಾರಾಟ, ಆರೋಗ್ಯಕರ ತಿಂಡಿ ತಿನಿಸುಗಳು, ಮಕ್ಕಳ ಆಟಿಕೆ, ವ್ಯಾಯಾಮದ ಪರಿಕರಗಳು, ಹೊಸ ಹೊಸ ಫಲಪುಷ್ಪ ತಳಿಗಳು ಸರ್ವರನ್ನು ಕೈ ಬೀಸಿ ಕರೆಯುತ್ತಿದ್ದವು.
ರೇಷ್ಮೆ ಕೃಷಿ ಕುರಿತು ಸಂಪೂರ್ಣ ಮಾಹಿತಿ: ವಿವಿಧ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವ ಜಿಲ್ಲೆಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ರೇಷ್ಮೆ ಬೆಳೆ ಉತ್ಪಾದನೆ ಕುರಿತು ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಯಿತು.ರೇಷ್ಮೆಯಿಂದ ತಯಾರಿಸಿದ ಹೂವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಕೀಟಗಳ ಕುರಿತು ಮಾಹಿತಿ: ಕೀಟ ಶಾಸ್ತ್ರ ವಿಭಾಗದಿಂದ ಆಯೋಜಿಸಲಾದ ಕೀಟ ಪ್ರಪಂಚ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿತ್ತು. ಜಗತ್ತಿನಲ್ಲಿರುವ ವೈವಿದ್ಯಮಯ ಕೀಟಗಳ ಪ್ರದರ್ಶನ ಮಾಡಲಾಗಿತ್ತು. ವಿದೇಶಗಳಲ್ಲಿ ಕೀಟಗಳಿಂದ ತಯಾರಿಸುವ ಆಹಾರಗಳ ಬಗ್ಗೆ ಪ್ರತ್ಯಕ್ಷಿಕೆಯನ್ನೂ ಮಳಿಗೆಯಲ್ಲಿ ನೀಡಲಾಯಿತು.
ಇ-ಸ್ಯಾಪ್ ಬಗ್ಗೆ ತಿಳಿದುಕೊಂಡ ರೈತರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳಬಳಕೆಯ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಮುಖ್ಯವಾಗಿ ಬೆಳೆಗಳಿಗೆ ಕೀಟ ಬಾದೆ ತಪ್ಪಿಸಲು ಇ-ಸ್ಯಾಪ್ ಅಪ್ಲಿಕೇಷನ್ ಕುರಿತು ಮಾಹಿತಿಯನ್ನು ಒದಗಿಸಲಾಯಿತು.
ಫಲಪುಷ್ಪ ಪ್ರದರ್ಶನ ವಿಶೇಷ: ಕೃಷಿ ವಿವಿಯಿಂದ ಹಮ್ಮಿಕೊಳ್ಳುವ ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ ಎನ್ನಬಹುದು. ಈ ಬಾರಿಯೂ ಫಲಪುಷ್ಪ ಪ್ರದರ್ಶನ ವಿಶೇಷವಾಗಿದ್ದು, ವಿವಿಧ ತಳಿಯ ಹಣ್ಣುಗಳು, ಹೂಗಳ ಬಗ್ಗೆ ಜನರು ನೋಡಿ ತಿಳಿದುಕೊಂಡರು. ಜತೆಗೆ ಶಿವಮೊಗ್ಗ ಕಲಾವಿದ ಹರೀಶ ಹಾಗೂ ತಂಡದಿಂದ ಹೂವಿನಲ್ಲಿ ತಯಾರಿಸಲಾದ ಇಂಡಿಯಾ ಗೇಟ್‌ನ ಮಾದರಿ, ಕಲ್ಲಂಗಡಿಯಲ್ಲಿ ಅರಳಿದ ಪರಮವೀರ ಚಕ್ರ ಪುರಸ್ಕೃತರ ಮುಖಗಳು ಜನರನ್ನು ಆಶ್ಚರ್ಯಗೊಳಿಸಿದವು. ಹಣ್ಣು ಮತ್ತು ತರಕಾರಿಯಲ್ಲಿ ರಚಿಸಲಾಗಿದ್ದ ಗಣೇಶ ಮೂರ್ತಿ ಹಾಗೂ ನವಿಲು ವಿಶೇಷವಾಗಿತ್ತು.
ಕೃಷಿಯಲ್ಲಿ ಡ್ರೋನ್ ಬಳಕೆ: ಕೃಷಿ ವಿವಿಯ ಆಡಳಿತದ ಭವನದ ಆವರಣದಲ್ಲಿ ಕೃಷಿಯಲ್ಲಿ ಡ್ರೋನ್ ಬಳಸಿಕೊಂಡು ಬೆಳೆಗಳಿಗೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಕುರಿತು ಕೃಷಿ ವಿವಿಯ ಕೃಷಿ ಯಂತ್ರೋಪಕರಣ ಹಾಗೂ ಶಕ್ತಿ ತಾಂತ್ರಿಕ ವಿಭಾಗದಿಂದ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಎರಡನೇ ದಿನದ ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮೇಳಕ್ಕೆ ಆಗಮಿಸಿದ ಜನರು ಭಾನುವಾರ ರಜೆಯನ್ನು ಮೇಳಕ್ಕೆ ಮೀಸಲಿಟ್ಟು ಸಂತಸಪಟ್ಟರು.