ಕೃಷಿಮೇಳ ಸಂಭ್ರಮಕ್ಕೆ ಸೀಮಿತವಾಗದಿರಲಿ

oplus_2
oplus_2
Published on

ರಾಯಚೂರು: ಕಲ್ಯಾಣ ಕರ್ನಾಟಕ ಸಂಪೂರ್ಣವಾಗಿ ಕೃಷಿ ಅವಲಂಭಿತವಾದ ಭಾಗವಾಗಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಕುರಿತು ಈ ಭಾಗದ ರೈತರಿಗೆ ಪರಿಚಯಿಸಿದಾಗ ಅವರ ಜೀವನ ಬದಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಭಾನುವಾರ ಮಾತನಾಡಿ, ಕೃಷಿ ಮೇಳ ಮಾಡುವುದು ಸಂಭ್ರಮಕ್ಕಲ್ಲ. ಹೊಸ ತಳಿಗಳು, ಸಂಶೋಧನೆ, ನಾಟಿ ವಿಧಾನದಿಂದ ಬೆಳೆ ಕಟಾವು ಮಾಡುವವರೆಗೂ ಎಲ್ಲ ಬೇಸಾಯ ಪದ್ದತಿಗಳನ್ನು ತಿಳಿಸುವುದು ಸೇರಿದಂತೆ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯ ಕುರಿತು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಇದರಿಂದ ರೈತರ ಆದಾಯವೂ ಹೆಚ್ಚಳವಾಗುತ್ತದೆ ಎಂದರು.

ಕೃಷಿಯಲ್ಲಿ ಕಡಿಮೆ ಖರ್ಚು ಹಾಗೂ ಹೆಚ್ಚಿನ ಆದಾಯವನ್ನು ಗಳಿಸುವ ನಿಟ್ಟಿನಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತರದೇ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ತಂದರೇ ಅದರ ಲಾಭ ದ್ವಿಗುಣವಾಗಿ ಸಿಗುತ್ತದೆ. ಜತೆಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಬೆಳೆಯನ್ನು ಪರಿಚಯಿಸುವುದರಿಂದ ಇಡೀ ರಾಜ್ಯದಲ್ಲಿ ಎಲ್ಲಿಯಾದರೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ನೇರವಾಗಿ ಹಣವನ್ನು ಗಳಿಸಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲ ಬಾರಿಗೆ 50 ಕೋಟಿ ವೆಚ್ಚದಲ್ಲಿ ಹಾರ‌್ವೆಸ್ಟ್ ಹೈಟೆಕ್ ಹಬ್‌ನಲ್ಲಿ ಯಂತ್ರೋಪಕರಣಗಳನ್ನು ಕೊಡುವಂತಹ ಕೆಲಸ ಆರಂಭಿಸಲಾಗಿದೆ. ರೈತರಿಗೆ ಸಬ್ಸಿಡಿ ಯೋಜನೆಯಡಿ ಯಂತ್ರೋಪಕರಣಗಳನ್ನು ನೀಡಲಾಗಿದೆ ಎಂದರು.

ಕೃಷಿ ಮೇಳಗಳಲ್ಲಿ ಪ್ರತಿವರ್ಷ ಹೊಸ ತಳಿಗಳನ್ನು ಸಂಶೋಧನೆ ಮಾಡುತ್ತಾ ರೈತರಿಗೆ ಮಾಹಿತಿ ನೀಡುವ ಕೆಲಸವಾಗುತ್ತಿದೆ. ಜಿಲ್ಲೆಯ ಕೊನೆಯ ಭಾಗದ ರೈತರು ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೃಷಿ ಹೊಂಡ ಯೋಜನೆಯನ್ನು ವಿಸ್ತರಿಸಲಾಗಿದೆ. ಇದರಿಂದ ಕೊನೆ ಭಾಗದ ರೈತರಿಗೆ ನೀರಿನ ಕೊರತೆ ನೀಗಲಿದೆ. ಕೇವಲ ಒಣ ಭೂಮಿಯಲ್ಲದೇ ನೀರಾವರಿ ಪ್ರದೇಶಗಳಲ್ಲಿಯೂ ಕೃಷಿ ಹೊಂಡ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆ ಹಾಗೂ ಸಂಶೋಧನಾ ಕೇಂದ್ರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮಳೆಯ ಕಾರಣ ಬೆಳೆಹಾನಿ ಉಂಟಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಎರಡನೇ ಬಾರಿ ಸಬ್ಸಿಡಿ ಯೋಜನೆಯಡಿ ಬಿತ್ತನೆ ಬೀಜ ವಿತರಿಸುವ ಕೆಲಸವಾಗಿದೆ ಎಂದರು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೊಸರಾಜು, ಶಾಸಕರಾದ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಜಿ.ಕರೆಮ್ಮ, ಎಂಎಲ್ಸಿಗಳಾದ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಶರಣಗೌಡ ಪಾಟೀಲ್ ಬಯ್ಯಪೂರ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸನಗೌಡ ಬ್ಯಾಗವಾಟ, ಮಲ್ಲೇಶ ಕೊಲಮಿ, ಡಿ.ಮಲ್ಲಿಕಾರ್ಜುನ, ತಿಮ್ಮಣ್ಣ ಸೋಮಪ್ಪ ಚಾವಡಿ, ಡಿಸಿ ಕೆ.ನಿತೀಶ, ಎಸ್ಪಿ ಎಂ.ಪುಟ್ಟಮಾದಯ್ಯ ಸೇರಿದಂತೆ ಇತರರಿದ್ದರು.

ಮಾನ್ವಿ ಶಾಸಕ ಹಂಪಯ್ಯ ನಾಯಕ ಕಿಡಿ

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಭಾನುವಾರ ನಡೆದ ಕೃಷಿಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಸ್ವಾಗತ ಭಾಷಣ ಮಾಡುವ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ ಹೆಸರನ್ನು ಮರೆತರು ಎನ್ನುವ ಕಾರಣಕ್ಕೆ ಶಾಸಕ ಹಂಪಯ್ಯ ನಾಯಕ ವೇದಿಕೆಯ ಮೇಲೆ ಎದ್ದು ನಿಂತು ಕುಲಪತಿ ಹನುಮಂತಪ್ಪರನ್ನು ತರಾಟೆಗೆ ತೆಗೆದುಕೊಂಡರು. ‘ಮೂರು ಜನ ಸಚಿವರಿರುವ ಕಾರ್ಯಕ್ರಮದಲ್ಲಿ ಒಬ್ಬ ಶಾಸಕನ ಹೆಸರು ಹೇಗೆ ಬಿಟ್ರಿ. ಹೇಗೆ ಸಾದ್ಯ.. ಕಾರ್ಡ್‌ನಲ್ಲಿ ನನ್ನ ಹೆಸರು ಇಲ್ಲವೇ ನೀ ಬಾ..’ ಎಂದು ಕುಲಪತಿಯನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net