

ರಾಯಚೂರು: ಕಳೆದ 13 ವರ್ಷಗಳಿಂದ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಾಜ ಸೇವೆಗಳು ಸಂಸ್ಥೆಯಿಂದ ಆಗಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ 13ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯ ಮಟ್ಟದ ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಅಬ್ದುಲ್ ಕಲಾಂ ಅವರು ಅಪ್ರತಿಮ ವಿಜ್ಞಾನಿ ಮತ್ತು ಮನವತಾವಾದಿಯಾಗಿದ್ದವರು. ಸರಳ ಜೀವನ ನಡೆಸುವ ಜತೆಗೆ ಬಡತನದಲ್ಲಿ ವಿದ್ಯಾಭ್ಯಾಸ ಮುಗಿಸಿ ದೇಶಕ್ಕೆ ಕೀರ್ತಿ ತರುವಲ್ಲಿ ಅವರ ಸೇವೆ, ಶ್ರಮ ಅಮೂಲ್ಯವಾದದ್ದು. ಅಂತಹ ಮಹಾನ್ ವ್ಯಕ್ತಿ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
13 ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಲಾಯಿತು. ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಯೋಗ, ವೈದ್ಯಕೀಯ, ರಂಗಭೂಮಿ, ಪೊಲೀಸ್ ಇಲಾಖೆ, ಕೃಷಿ ಕ್ಷೇತ್ರ ಸೇರಿ ಇನ್ನಿತರ ವಲಯಗಳನ್ನು ಸಾಧನೆ ಮಾಡಿದ 22 ಸಾಧಕರಿಗೆ ಅತ್ಯುತ್ತಮ ಪ್ರಶಸ್ತಿ ಹಾಗೂ ಎಲೆಬಿಚ್ಚಾಲೆ ಪ್ರಾಥಮಿಕ ಶಾಲೆ, ಬುರ್ದಿಪಾಡು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಾಣದಾಳದ ವಿದ್ಯಾನಿಕೇತನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಪರಿಸರ ಶಾಲಾ ಪ್ರಶಸ್ತಿ ನೀಡಲಾಯಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಸ್ಮಿತಾ ಅಕ್ಕ, ಓಂ ಸಾಯಿ ಧ್ಯಾನ ಮಂದಿರದ ಅಧ್ಯಕ್ಷ ಸಾಯಿ ಕಿರಣ್ ಆದೋನಿ, ಯಾಪಲದಿನ್ನಿ ಗ್ರಾಪಂ ಅಧ್ಯಕ್ಷೆ ಉಷಾ, ಆರೋಗ್ಯ ಇಲಾಖೆ ತರಬೇತಿ ಕೇಂದ್ರ ಪ್ರಾಚಾರ್ಯ ವೆಂಕಟೇಶ್ ನಾಯಕ, ಕಲಾಂ ಸಂಸ್ಥೆ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಪ್ರಮುಖರಾದ ರಾಕೇಶ್ ರಾಜಲಬಂಡ, ಹನುಮಂತ ಕೋರಾಪುರ, ಸಾಜಿದ್ ಸಮೀರ್ ಇತರರಿದ್ದರು.