ನಾಲ್ಕು ವರ್ಷವಾದರೂ ಕಾಮಗಾರಿ ಅಪೂರ್ಣ: ಅಬ್ದುಲ್ ಕಲಾಂ ವಸತಿ ಶಾಲೆ ಕಟ್ಟಡಕ್ಕೆ ಹಿಡಿದ ಗ್ರಹಣ

IMG-20241202-WA0033
Published on

ರಾಯಚೂರು: ಸರ್ಕಾರದಿಂದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಆಯಾ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಗೆ 2018-19ನೇ ಸಾಲಿನಲ್ಲಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮಂಜೂರಾಗಿದ್ದು, 2020ರಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆ. 4 ವರ್ಷ ಕಳೆದರೂ ಶಾಲೆಯ ಕಟ್ಟಡ ಇನ್ನೂ ಪೂರ್ಣಗೊಳ್ಳದೇ ಪ್ರಗತಿ ಹಂತದಲ್ಲಿದ್ದು, ವಿದ್ಯಾರ್ಥಿಗಳ ಓದಿಗೆ ತೊಂದರೆ ಉಂಟಾಗುತ್ತಿದೆ.

ನಗರದ ಹೊರವಲಯದ ಏಗನೂರು ಬಳಿಯ ಸುಂಕನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಸುತ್ತಲೂ ಕಾಂಪೌಂಡ್, ಶಾಲೆಗೆ ಹೋಗುವ ರಸ್ತೆಯನ್ನೂ ನಿರ್ಮಿಸಿಲ್ಲ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ನೂತನ ಕಟ್ಟಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಕನಸ್ಸು ಕನಸ್ಸಾಗಿಯೇ ಉಳಿಯುವಂತಾಗಿದೆ.

ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಓದಬೇಕಾದ ವಿದ್ಯಾರ್ಥಿಗಳು ಸದ್ಯ ಯರಮರಸ್ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದು, ಈ ಶಾಲೆಯಲ್ಲಿಯೂ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಓದುವ ಮಕ್ಕಳಿಗೆ ಸುರಕ್ಷತೆಯಿಲ್ಲದಂತಾಗಿದೆ.

ಸುಂಕನೂರು ಗ್ರಾಮದ ಬಳಿಯಿರುವ ಸರ್ಕಾರ ಜಾಗದಲ್ಲಿ ಅಬ್ದುಲ್ ಕಲಾಂ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. 2020ರ ಮೇ ತಿಂಗಳಿನಲ್ಲಿ ಈ ಕಟ್ಟಡವನ್ನು ಪೊರ್ಣಗೊಳಿಸಬೇಕಾಗಿತ್ತು. ಕರ್ನಾಟಕ ಹೌಸಿಂಗ್ ಬೋರ್ಡ್‌ನಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಗೃಹ ಮಂಡಳಿಯಿಂದ 17 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಲಾಗಿದೆ. ಆದರೆ ಸರ್ಕಾರದಿಂದ ಕೇವಲ 12 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 5 ಕೋಟಿ ರೂ.ಬರುವುದು ಬಾಕಿಯಿದೆ.

ಅನುದಾನ ಬಿಡುಗಡೆ ಮಾತ್ರವಲ್ಲ ಈ ಕಟ್ಟಡದಲ್ಲಿ ಇನ್ನೂ ವಿದ್ಯುತ್ ಸಂಪರ್ಕ, ನೆಲಹಾಸು, ನೀರಿನ ಮರುಬಳಕೆಗಾಗಿ ನಿರ್ಮಾಣ ಮಾಡಬೇಕಾದ ಪೌಂಡ್ ನಿರ್ಮಾಣ, ಪ್ಲಂಬಿಂಗ್ ಕೆಲಸ, ಬಾಗಿಲು ಕಿಟಕಿಗಳನ್ನು ಕೂರಿಸುವ ಕೆಲಸಗಳೂ ಕೂಡ ಬಾಕಿ ಇವೆ.

6 ರಿಂದ 12ನೇ ತರಗತಿಯ ಒಟ್ಟು 480 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಸ್ವಂತ ಕಟ್ಟಡವಿಲ್ಲದೇ. ಒದ್ದಾಡುವಂತಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದಿಂದ ಮಂಜೂರಾಗಿರುವ ವಸತಿ ಶಾಲೆ, ಶಾಲೆಗೆ ಹೋಗುವ ರಸ್ತೆ ಹಾಗೂ ಶಾಲಾ ಕಾಂಪೌಂಡನ್ನು ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಪೂರ್ಣಗೊಳಿಸುವರು ಎಂದು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಆರಂಭದ ಮುನ್ನವೇ ಬಿರುಕು

ಏಗನೂರು ಬಳಿಯ ಸುಂಕನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಸತಿ ಶಾಲೆ ಕಟ್ಟಡ ಆರಂಭಕ್ಕೂ ಮುನ್ನವೇ ಬಿರುಕು ಬಿದ್ದಿದೆ. ಕೋಟಿ ರೂ.ವೆಚ್ಚ ಮಾಡಿದರೂ ಕಟ್ಟಡಕ್ಕೆ ಸರಿಯಾದ ಕ್ಯೂರಿಂಗ್ ಆಗದೇ ಹಾಗೂ ಗುಣಮಟ್ಟದ ಕಟ್ಟಡ ಕಾಮಗಾರಿಯಾಗಿಲ್ಲ. ಕಟ್ಟಡದ ಅಲ್ಲಲ್ಲಿ ಬಿರುಕುಗಳು ಕಾಣುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.

ಏಗನೂರು ಬಳಿಯ ವಸತಿ ಶಾಲೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಶಾಲೆಯ ಸುತ್ತಲೂ ಕಾಂಪೌಂಡ್ ಮತ್ತು ರಸ್ತೆ ನಿರ್ಮಾಣ ಕೂಡಲೇ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗುವುದು. | ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಾಂಪೌಂಡ್ ನಿರ್ಮಾಣ ಕಾಮಗಾರಿ ಈ ವರ್ಷ ಆರಂಭವಾಗಲಿದೆ. ರಸ್ತೆ ನಿರ್ಮಾಣದ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. | ಸಂಗಮೇಶ್ವರ, ಜಿಲ್ಲಾ ಅಲ್ಪಸಂಕ್ಯಾತ ಕಲ್ಯಾಣಾಧಿಕಾರಿ, ರಾಯಚೂರು. ವಸತಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಸುರಕ್ಷತೆ ಬಹಳ ಮುಕ್ಯವಾಗಿರುತ್ತದೆ. ಮೂಲಭೂತ ಸೌಲಭ್ಯ ನೀಡಲು ಅಧಿಕಾರಿಗಳು. ಮುಂದಾಗಬೇಕು. ಮೊದಲು ವಸತಿ ಶಾಲೆಗೆ ಹೋಗಲು ರಸ್ತೆ ನಿರ್ಮಾಣ ಮಾಡುವುದು ಅತ್ಯಗತ್ಯ. | ಬಸವರಾಜ ಬೊಮ್ಮನಾಳ, ಪಾಲಕ, ಏಗನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net