

ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೊಲೆಗೀಡಾದ ರಾಯಬಾಗದ ವಕೀಲ ಸಂತೋಷ ಪಾಟೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಿದ್ದು, ಪರಾರಿಯಾಗಿರುವ ಇಬ್ಬರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವನಗೌಡ ಪಾಟೀಲ ಸೇರಿ ರಾಯಬಾಗ ತಾಲೂಕಿನ ಬಸ್ತವಾಡದ ಭರತ ಕೋಳಿ, ಬಿರನಾಳದ ಕಿರಣ ಕೆಂಪವಾಡೆ, ಚಂದೂರಿನ ಸುರೇಶ ನಂದಿ, ಗೋಕಾಕ ತಾಲೂಕಿನ ಗುಜನಾಳದ ಉದಯ ಮುಶೆನ್ನವರ, ಬೈಲಹೊಂಗಲ ತಾಲೂಕಿನ ವಣ್ಣೂರಿನ ಸಂಜಯಕುಮಾರ ಹಳಬನ್ನವರ, ಗಜಮನಾಳದ ರಾಮು ದಂಡಾಪೂರೆ, ಬೆಳಗಾವಿ ತಾಲೂಕಿನ ಹೊನ್ನಿಹಾಳದ ಮಂಜುನಾಥ ತಳವಾರ ಬಂಧಿತರು. ಪರಾರಿಯಾಗಿರುವ ರಾಯಬಾಗ ತಾಲೂಕಿನ ಅಳಗವಾಡಿಯ ಮಹಾವೀರ ಹಂಜೆ, ಹೊನ್ನಿಹಾಳದ ನಾಗರಾಜ ನಾಯಕ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು.
2025ರ ಏ. 29ರಂದು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಿಂದ ಬೈಕ್ ಮೇಲೆ ಕೋರ್ಟ್ಗೆ ಹೋಗುತ್ತಿದ್ದಾಗ ವಕೀಲ ಸಂತೋಷ ಪಾಟೀಲ ಅವರನ್ನು ಅಪಹರಿಸಿದ್ದಾರೆಂದು ಪತ್ನಿ ರೇಖಾ ನೀಡಿದ ದೂರಿನ ಮೇಲೆ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ವಿವರ: ಮೃತ ಸಂತೋಷ ಪಾಟೀಲ ಮತ್ತು ಶಿವಗೌಡ ಪಾಟೀಲ ಇಬ್ಬರೂ ವಕೀಲರಾಗಿದ್ದು, ರಾಯಬಾಗ ಪಟ್ಟಣದಲ್ಲಿರುವ 1.4 ಎಕರೆ ಆಸ್ತಿಗೆ ಸಂಬಂಧಿಸಿದಂತೆ ಇವರಿಬ್ಬರಲ್ಲಿ ವಿವಾದವಿತ್ತು. ಜ. 1ರಂದು ಸಂತೋಷ ಪಾಟೀಲ ಸಿವಿಲ್ ದಾವೆ ಹೂಡಿದ್ದರು. ಇದರಿಂದ ಸಿಟ್ಟಾದ ಶಿವಗೌಡ ತನ್ನ ಕಿರಿಯ ವಕೀಲರಾದ ಭರತ, ಕಿರಣ, ಮಹಾವೀರ ಇನ್ನಿತರರ ಜತೆ ಸೇರಿ ಏ.29ರಂದು ಸಂತೋಷ ಪಾಟೀಲ ಅವರನ್ನು ಅಪಹರಿಸಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಗುಣೇಶಗುಡಿಯಲ್ಲಿ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಕೊಲೆಗೆ 14 ಲಕ್ಷ ರೂ. ಸುಪಾರಿ ನೀಡಿ, 11 ಲಕ್ಷ ರೂ. ಕೊಟ್ಟಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.