ರಾಯಬಾಗ ಸರ್ವಧರ್ಮದ ಬೀಡು

19Rayabag2
Published on

ರಾಯಬಾಗ: ಸಾಂಸ್ಕೃತಿಕ ತೊಟ್ಟಿಲು ಎನಿಸಿಕೊಂಡಿರುವ ಪಟ್ಟಣ ಐತಿಹಾಸಿಕ ಪರಂಪರೆ ಹೊಂದಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ರಾಯಬಾಗ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜರ ಕಾಲದಿಂದಲೂ ಎಲ್ಲ ಭಾಷೆ, ಧರ್ಮ ಹಾಗೂ ಎಲ್ಲ ವರ್ಗದ ಜನರನ್ನು ಒಳಗೊಂಡು ಸಮನ್ವಯದಿಂದ ಬಾಳುತ್ತಿರುವ ನಾಡು ರಾಯಬಾಗ. ಕನ್ನಡ ಭಾಷೆ, ಶಾಲೆ ಉಳಿಸಿ ಬೆಳೆಸುವ ಸರ್ಕಾರವೇ ಇಂದು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಿರುವುದು ವಿಷಾದನೀಯ ಎಂದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಪ್ರಥಮ ಬಾರಿಗೆ ರಾಯಬಾಗ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸದ ವಿಷಯ. ಕನ್ನಡ ಭಾಷೆ, ಸಾಹಿತ್ಯ ಶ್ರೀಮಂತವಾಗಿದೆ. ಕನ್ನಡವನ್ನು ಗಟ್ಟಿಯಾಗಿ ಕಟ್ಟಲು ಎಲ್ಲರೂ ಕೈ ಜೋಡಿಸಬೇಕೆಂದರು.

ಅಬಾಜಿ ೌಂಡೇಷನ್ ಅಧ್ಯಕ್ಷ ಪ್ರಣಯ ಪಾಟೀಲ ಮಾತನಾಡಿ, ಕನ್ನಡ ಭಾಷೆ ಉಳಿಸಿ-ಬೆಳೆಸಲು ಕನ್ನಡಿಗರು ಕಂಕಣಬದ್ಧವಾಗಬೇಕು ಎಂದು ಹೇಳಿದರು.

ಸಮ್ಮೇಳನ ಸರ್ವಾಧ್ಯಕ್ಷೆ ಡಾ.ರತ್ನಾ ಬಾನಪ್ಪನವರ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟ್ಟಗುಡ್ಡ ಮಾತನಾಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ.ವಿ.ಎಸ್.ಮಾಳಿ, ತಹಸೀಲ್ದಾರ್ ಸುರೇಶ ಮುಂಜೆ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಕಸಾಪ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ, ಸಿಪಿಐ ಬಿ.ಎಸ್.ಮಂಟೂರ, ಬಿಇಒ ಬಸವರಾಜಪ್ಪ ಆರ್., ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಉಮೇಶ ಪೋಳ, ಕಸಾಪ ಕುಡಜಿ ಹೋಬಳಿ ಅಧ್ಯಕ್ಷ ಸಂತೋಷ ಸನದಿ, ದಶರಥ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net